January 30, 2009

ಮೊಗ್ಗಿನ ಮನಸ್ಸು ಚೆನ್ನಾಗಿತ್ತು!!

ಅದೆಷ್ಟೋ ದಿನಗಳು ಕಳೆದ ನಂತರ ಒಂದು ಉತ್ತಮ ಸಿನಿಮಾ ನೋಡಿದ ಅನುಭವ ಮೊಗ್ಗಿನ ಮನಸ್ಸನ್ನು ನೋಡಿದ ಮೇಲಾಯಿತು. ಮೊಗ್ಗಿನ ಮನಸ್ಸು ನೋಡುವ ಹಂಬಲ ನಮ್ಮ ಮನಸ್ಸಿನಲ್ಲಿರಲಿಲ್ಲ ಆದರೂ ಸಮಯ ವ್ಯಯಿಸಲೆಂದು ರೂಮಿನಲ್ಲಿ ಕೂತು ಸಿನಿಮಾ ನೋಡಿದೆವು. ಪಿನ್ ಪಾಯಿಂಟ್ ಸದ್ದಿಲ್ಲದೇ ಎಲ್ಲರೂ ಮೌನವಾಗಿ ಸಿನಿಮಾ ನೋಡುತ್ತಿದ್ದರು. ಸಿನಿಮಾ ಮುಗಿದ್ದದ್ದೇ ತಡ ಎಲ್ಲರೂ ‘ಇದು ಮುಂಗಾರು ಮಳೆಗಿಂತಲೂ ಚೆನ್ನಾಗಿದೆ ಅಲ್ವಾ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಡುಗಳಂತೂ ಸುಪರ್... ಹುಡುಗಿರ ಅಭಿನಯವನ್ನು ಕಂಡು ಹುಡುಗರು (ಯಶ್ ಅಭಿನಯ ಓಕೆ) ಅಭಿನಯ ಕಲಿಯಬೇಕಿತ್ತು. ಸಿನಿಮಾದಲ್ಲಿ ಹುಡುಗರ ನಟನೆ ನಾಟಕೀಯವಾಗಿತ್ತು ಎಂಬುದರ ಹೊರತು ಎಲ್ಲವೂ ಸುಪರ್... ಕ್ಯಾಮೆರಾ ವನ್ನು ಮಂಗಳೂರಿಗೆ ಒಂದು ಬಾರಿ ಹೋಗುವಂತೆ ಪ್ರಚೋದಿಸುತ್ತದೆ.

ಹೆಣ್ಣಿನ ಮನಸ್ಸು, ಅವಳ ಪ್ರತಿನಿತ್ಯದ ಬದುಕನ್ನು ಚೆನ್ನಾಗಿ ಬಿಂಬಿಸಿದ ‘ಮೊಗ್ಗಿನ ಮನಸ್ಸು’ ನಮ್ಮ ಮನಸ್ಸನ್ನು ಗೆದ್ದಿದೆ. ನಿರ್ದೇಶಕರಿಗೆ ಅನಂತ ವಂದನೆಗಳು. ಇಂಥಹ ಉತ್ತಮ ಕಥೆಯನ್ನು ಆಯ್ಕೆ ಮಾಡಿ ನಮಗೆ ತೋರಿಸಿದ ಸಿನಿಮಾ ನಿರ್ಮಾಪಕ ಹಾಗೂ ತಂಡಕ್ಕೆ ಅಭಿನಂದನೆಗಳು. ಸಿನಿಮಾ ನೋಡಿದ ಮೇಲೆ ಅದೆಷ್ಟೊ ಬಾರಿ ಅಂದು ಕೊಂಡಿದ್ದೆ. ನನ್ನ ಬ್ಲಾಗ್ ನಲ್ಲಿ ಮೊಗ್ಗಿನ ಮನಸ್ಸಿನ ಕುರಿತು ಬರೆಯಬೇಕೆಂದು... ಇಂದು ಸಮಯ ಸಿಕ್ಕಿತು.


ಧನ್ಯವಾದಗಳು!!

December 6, 2008

ಚುಮುಚುಮು ಚಳಿಯ ಜತೆ ಕ್ರಿಸ್ ಮಸ್ ಸಂಭ್ರಮ

ಡಿಸೆಂಬರ್ ತಿಂಗಳು ಬಂತೆಂದರೆ ಚಳಿ ಹೆಚ್ಚುತ್ತಿರುತ್ತದೆ. ಮಕ್ಕಳಿಗೆ ಶಾಲೆಗೆ ಹೋಗಲು ಇಷ್ಟವಿಲ್ಲ. ಬದಲಾಗಿ ಕ್ರಿಸ್ ಮಸ್ ತಯಾರಿ ನಡೆಸಲು ಎಲ್ಲಿಲ್ಲದ ಆಸಕ್ತಿ. ಉದ್ಯೋಗಿಗಳಂತೂ ಶಾಪಿಂಗ್ ಗಾಗಿ ಒಂದು ವಾರ ರಜೆ ಪಡೆಯುತ್ತಾರೆ. ವಿದೇಶದಲ್ಲಿದ್ದ ಸ್ನೇಹಿತರೆಲ್ಲಾ ಕ್ರಿಸ್ ಮಸ್ ಆಚರಣೆಗಾಗಿ ಹುಟ್ಟೂರಿಗೆ ಆಗಮಿಸುತ್ತಾರೆ.
ಕ್ರೈಸ್ತರಿಗೆ ಕ್ರಿಸ್ ಮಸ್ ಅಂದರೆ ಯೇಸುವಿನ ಜನನದ ಸಂಭ್ರಮವನ್ನು ತಮ್ಮ ಹುಟ್ಟೂರಿನಲ್ಲೇ ಆಚರಿಸುವ ತವಕ.
೨೦೪೧ ವರ್ಷಗಳ ಹಿಂದೆ ಜೆರುಸಲೇಮಿನ ಬೆತ್ಲೆಹೆಮ್ ಎಂಬ ಶಹರದ ಗೋದಲಿಯೊಂದರಲ್ಲಿ ಮೇರಿ ಹಾಗೂ ಸಂತ ಜೋಸೆಫ್ ಅವರ ಮಗುವಾಗಿ ಡಿ. ೨೫ ರಂದು ಯೇಸುವಿನ ಜನನವಾಯಿತು. ಅಂದು ದೇವದೂತರು, ದನಕಾಯುವವರು ಅಷ್ಟೇ ಅಲ್ಲ, ಎಲ್ಲ ಜೀವಿಗಳು ಸಂಭ್ರಮಪಟ್ಟವು. ಮುರು ಮಂದಿ ರಾಜರುಗಳು ತಮ್ಮ ಕಾಣಿಕೆಗಳೊಡನೆ ನಕ್ಷತ್ರದ ಸಹಾಯದಿಂದ ಯೇಸುವನ್ನು ನೋಡಲು ಹೋಗಿದ್ದರು.


ಈ ನೆನಪಿನಲ್ಲೇ ಕ್ರೈಸ್ತರು ಗೋದಲಿ ನಿರ್ಮಿಸುತ್ತಾರೆ. ನಕ್ಷತ್ರ ತೂಗುತ್ತಾರೆ, ಬಾಲ ಯೇಸುವಿನ ಶಿಲ್ಪವನ್ನಿಟ್ಟು ಅಕ್ಕ ಪಕ್ಕದಲ್ಲಿ ಸಂತ ಜೋಸೆಫ್, ಮೇರಿ ಮಾತೆಯ ಪ್ರತಿಮೆಯನ್ನಿಡುತ್ತಾರೆ. ‘ಕ್ರಿಸ್ ಮಸ್ ಟ್ರೀ’ ಕುರಿತಾಗಿ ಹೇಳುವುದಾದರೆ ಕ್ರಿಸ್ ಮಸ್ ಸಂಭ್ರಮವನ್ನು ಹೆಚ್ಚಿಸುವ ಉದ್ದೇಶದಿಂದ ಸಂತ ಫ್ರಾನ್ಸಿಸ್ ಅಸ್ಸಿಸಿ ಎಂಬವರು ಮೊದಲ ಬಾರಿಗೆ ಕ್ರಿಸ್ಮಸ್ ಟ್ರೀ ಮಾಡಿದರು. ಮುಂದೆ ಈ ಆಚರಣೆ ಪ್ರಪಂಚದಲ್ಲೆಡೆ ಪಸರಿಸಿತು.

ಸಂತ ನಿಕೋಲಸ್ ಎಂಬಾತ ಕ್ರಿಸ್ಮಸ್ ದಿನದಂದು ಬಡವರಿಗಾಗಿ ಕಾಣಿಕೆಗಳನ್ನು ಕೊಡುತ್ತಿದ್ದರು. ಅವರು ತಮ್ಮ ವಿಶಿಷ್ಟ ಉಡುಗೆಯಿಂದ ಮಕ್ಕಳ ಮನಗೆದ್ದರು. ಅವರ ನೆನಪಿಗಾಗಿ ಸಾಂತಾ ಕ್ಲಾಸ್ ಈಗಲೂ ಡಿಸೆಂಬರ್ ತಿಂಗಳಲ್ಲಿ ನಮ್ಮ ಮನೆಮುಂದೆ ಪ್ರತ್ಯಕ್ಷರಾಗುತ್ತಾರೆ.


ಕರಾವಳಿ ಕ್ರೈಸ್ತರು ತಯಾರಿಸುವ ಕ್ರಿಸ್ಮಸ್ ತಿಂಡಿಗೆ ‘ಕುಸ್ವಾರ್’ ಎಂದು ಹೆಸರು. ಕ್ರಿಸ್ಮಸ್ ಕೇಕ್ ಇಲ್ಲಿನ ಯಜಮಾನ. ಕಿಡಿಯೊ, ಗುಳಿಯೊ, ನಿವ್ರ್ಯೊ, ಕ್ಕೊಕ್ಕಿಸಾ, ಲಾಡು, ತುಕ್ಡಿ, ಚಕ್ಕುಲಿ, ಚಿಪ್ಸ್ ಇವೆಲ್ಲವನ್ನು ಮನೆಯಲ್ಲೇ ತಯಾರಿಸಿ ನಂತರ ನೆರೆಹೊರೆ ಹಾಗೂ ಸ್ನೇಹಿತರಿಗೆ ಹಂಚಿ ಸಂಭ್ರಮಿಸುವುದು ಪರಸ್ಪರರ ನಡುವೆ ಆತ್ನೀಯತೆ ಹೆಚ್ಚಿಸಲು ಸಹಕಾರಿ.
ಕ್ರಿಸ್ ಮಸ್ ಕುರಿತ ಸಂದೇಶ ನೀಡುವ ಗ್ರೀಟಿಂಗ್ಸ್ ಕಾರ್ಡ್ ಗಳನ್ನು ಪರಸ್ಪರ ರವಾನಿಸುವುದು, ಶಾಲಾ ಕಾಲೇಜುಗಳಲ್ಲಿ ‘ಕ್ರಿಸ್ ಮಸ್ ಫ್ರೆಂಡ್’ ಆಚರಿಸುವುದು ಇವೆಲ್ಲಾ ಕ್ರಿಸ್ ಮಸ್ ಸಡಗರವನ್ನು ಹೆಚ್ಚಿಸುತ್ತಿದೆ. ಉಳಿದಂತೆ ಹೊಸ ವಿನ್ಯಾಸದ ಹೊಸ ಉಡುಗೆ ತೊಡುಗೆ ಧರಿಸಿ ಡಿ. ೨೪ರ ರಾತ್ರಿ ಚರ್ಚ್ ಗಳಲ್ಲಿ ಪೂಜಾ ಸಮಾರಂಭದಲ್ಲಿ ಭಾಗಿಯಾಗುವುದು. ಪೂಜಾ ಬಲಿದಾನ ನಂತರ ಪರಸ್ಪರ ಕ್ರಿಸ್ಮಸ್ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಕ್ರಿಸ್ಮಸ್ ಹಾಡುಗಳಿಗೆ (ಕ್ಯಾರಲ್ಸ್) ಸಾಂತಾ ಕ್ಲಾಸ್ ಜತೆಗೆ ಕುಣಿಯುವುದು. ಡಿಸೆಂಬರ್ ೨೫ ರಿಂದ ಕ್ಯಾರಲ್ಸ್ ಜತೆಗೆ ಸಾಂತಾಕ್ಲಾಸ್ ಮನೆಮನೆಗೆ ಆಗಮಿಸಿ ಸಂತಸ ಹಂಚಿಕೊಳ್ಳುವುದು.
ಕುಸ್ವಾರ್, ಕ್ರಿಸ್ಮಸ್ ಟ್ರೀ, ಗೋದಲಿ ಮುಂತಾದವುಗಳನ್ನು ಚೆನ್ನಾಗಿ ಮಾಡಿದ್ದವರಿಗೆ ಬಹುಮಾನಗಳನ್ನು ವಿತರಿಸುವ ಕಾರ್ಯಕ್ರಮಗಳು ಇತ್ತೀಚೆಗೆ ಹೆಚ್ಚುತ್ತಿದೆ.
ಇದು ಕ್ರೈಸ್ತ ಬಾಂಧವರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಕ್ರಿಸ್ ಮಸ್ ದಿನಾಚರಣೆಯ ಮೌಲ್ಯಗಳನ್ನು ತಿಳಿಯಲು ಅನುವು ಮಾಡಿಕೊಡುತ್ತಿದೆ.
ಮಾರಾಟಗಾರರಿಗಂತೂ ಡಿಸೆಂಬರ್ ತಿಂಗಳು ಬಂತೆಂದರೆ ರಸದೌತಣ. ಬಹುಶ: ವರ್ಷದಲ್ಲಿ ಅತೀ ಹೆಚ್ಚು ವಸ್ತುಗಳಿಗೆ ಬೇಡಿಕೆ ಇರುವ ಏಕೈಕ ತಿಂಗಳು ಡಿಸೆಂಬರ್.

ಮನೆಗೆ ಮರು ಪೈಂಟ್ ಹಾಕಿ ಮನೆಯನ್ನು ಅಲಂಕರಿಸುವುದು, ಬಗೆಬಗೆಯ ನಕ್ಷತ್ರಗಳನ್ನು, ವಿದ್ಯುತ್ ದೀಪಗಳನ್ನು ಖರೀದಿಸುವುದು, ಮೊಬೈಲ್ ಗಳಲ್ಲಿ ಜಿಂಗಲ್ ಬೆಲ್ಸ್ ಕುರಿತ ರಿಂಗ್ ಟೋನ್ ಹಾಕುವುದು, ಕ್ರಿಸ್ಮಸ್ ಗಾಗಿಯೇ ರಚಿಸಿರುವ ಹಾಡುಗಳನ್ನು ಹಾಡುವುದು ಕ್ರಿಸ್ತ ಜಯಂತಿಯ ಸಂಭ್ರಮದಲ್ಲಿ ಸೇರಿದೆ.

October 28, 2008

ದೀಪಾವಳಿ ಮಜಾನೇ ಬೇರೆ

ಬಣ್ಣ ಬಣ್ಣದ ಪಟಾಕಿಗಳ ಸದ್ದು...

ಒಂದೆಡೆ ವಾಯು ಮಾಲಿನ್ಯ ಇನ್ನೊಂದೆಡೆ ಶಬ್ದ ಮಾಲಿನ್ಯ ಆಗುತ್ತಿದ್ದರೂ ದೀಪಾವಳಿ ಪಟಾಕಿ ಸುಡುವುದರಲ್ಲಿರುವ ಮಜಾನೇ ಬೇರೆ. ಪಟಾಕಿ ಸುಡುವಾಗ ಏನೋ ಒಂಥರಾ ಮಜಾ... ಮನಸ್ಸಿಗೆ ಉಲ್ಲಾಸ ಸಂಭ್ರಮ. ಏನನ್ನೋ ಗೆದ್ದುಕೊಂಡ ಸಂಭ್ರಮ.
ಪತ್ರಿಕೆಗಳಿಗೆ ವಿಶೇಷ ಸಂಚಿಕೆ ಜೊತೆಗೆ ವಾರ್ಷಿಕ magazine (ದೀಪಾವಳಿ ವಿಶೇಷಾಂಕ) ಹೊರ ತರುವ ಸಂಭ್ರಮ... ಜಾಹೀರಾತುದಾರರಿಗಂತೂ ಸುಗ್ಗಿಯೋ ಸುಗ್ಗಿ... ಟಿವಿ ಮತ್ತು ರೇಡಿಯೋದಲ್ಲಿ ಹಬ್ಬದ ವಿಶೇಷ ಕಾರ್ಯಕ್ರಮಗಳ ಪ್ರಸಾರ

ಎಲ್ಲೆಲ್ಲಿ ನೋಡಿದರೂ ಸಂಭ್ರಮ... ರಾತ್ರಿ ಹೊತ್ತು ಆಕಾಶದೆಡೆಗೆ ಕಣ್ಣು ಹಾಯಿಸಿದರೆ ವ್ಹಾ... ರಸದೌತಣ... ವಿನೂತನ ಜಗತ್ತಿಗೆ ಪಯಣಿಸಿದ ಅನುಭವ... ಪ್ರತೀ ದಿನ ದೀಪಾವಳಿ ಹಾಗಿರಬಾರದೇ ಎನ್ನೊ ಹಂಬಲ.

August 14, 2008

ನಾವು ಸ್ವತಂತ್ರರು ಅಂತಾರೆ ಎಲ್ಲಾ..


ಸ್ವಾತಂತ್ರ್ಯ ದಿನಾಚರಣೆಯಂದು ಮನೆಯಿಂದ ಹೊರಬರಲು ನಮಗೆ ಬಾಂಬ್ ಸ್ಪೋಟವಾದಿತೆಂಬ ಭಯ. ಆದ್ರೂ ನಾವು ಸ್ವತಂತ್ರರು :)

ತಿಂಗಳ ಹಿಂದೆ ಅದೆಷ್ಟು ಮಂದಿ ಈ ಬಾರಿ ಸ್ವಾತಂತ್ರ್ಯ ದಿನದಂದು ಊರಿಗೆ ಹೋಗಬೇಕು, ಸ್ನೇಹಿತರನ್ನು ಸಂದರ್ಶಿಸಬೇಕು, ಹಳೆ ಶಾಲೆ / ಕಾಲೇಜಿಗೆ ಹೋಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಶಾಪಿಂಗ್ ಮಾಡಬೇಕು(ಸ್ಪೇಷಲ್ ಆಫರ್ ಇರುತ್ತಲ್ಲ) ಎಂದೆಲ್ಲಾ ಮುಂದಾಲೋಚನೆ ಮಾಡಿರುವವರು ಕಳೆದ ಕೆಲವು ಶುಕ್ರವಾರಗಳಲ್ಲಿ ನಡೆದಂತಹ ಭಯೋತ್ಪಾದಕ ದಾಳಿಗೆ ಹೆದರಿ ‘ಬದುಕಿತು ಬಡಜೀವ’ ಎಂದು ಮನೆಯಲ್ಲೇ ಇರಲು ಒಲ್ಲದ ಮನಸ್ಸಿನಿಂದ ನಿರ್ಧರಿಸಿದ್ದಾರೆ.


ನಾವು ನಿಜಕ್ಕೂ ಸ್ವತಂತ್ರರೇ?


ರಾಜಾರೋಷವಾಗಿ ಸಿಗರೇಟು ಸೇದುವುದು, ಡ್ರಗ್ಸ್ ತೆಗೆದುಕೊಳ್ಳುವುದು, ಇತರರನ್ನು ಕೆಣಕುವುದು, ಕೋಮುವಾದ ಸ್ರಷ್ಟಿಸುವುದು... ಮುಂತಾದವುಗಳನ್ನು ಮಾಡುತ್ತಾ ಬದುಕುವುದೂ ಸ್ವತಂತ್ರ ಬದುಕೇ?


ಹೊಡಿಬಡಿಯುವುದು, ಮಜಾ ಅನುಭವಿಸುವುದು ಇವೂ ಸ್ವತಂತ್ರ್ಯದ ಪ್ರಮುಖ ಅಂಶಗಳಾಗಿಬಿಟ್ಟವೇ?
ಸ್ವತಂತ್ರ್ಯಾ ದಿನಾಚರಣೆ ಎಂದರೆ ರಾಷ್ಟ್ರಧ್ವಜವನ್ನು ಮೈಯಲ್ಲೆಲ್ಲಾ ಹಾಕಿ ಪಬ್ ಕ್ಲಬ್ ಗಳಲ್ಲಿ ಕುಣಿಯುವುದೇ?

ನಮ್ಮ ದೇಶದಲ್ಲಿರುವ ಅನಾಥಾಶ್ರಮ, ಆಸ್ಪತ್ರೆ ಅಥವಾ ಜೈಲುಗಳಿಗೆ ನಾವೆಷ್ಟು ಬಾರಿ ಸಂದರ್ಶಿಸಲು ಪ್ರಯತ್ನಿಸಿದ್ದೇವೆ? ರಕ್ತದಾನ ಮಾಡಲು ನಾವೆಷ್ಟು ಬಾರಿ ಮುಂದೆ ಬಂದಿದ್ದೇವೆ? ದೊಡ್ಡ ದೊಡ್ಡ ಮಾಲ್ ಗಳಲ್ಲಿ ಹೇಳಿದ ಬೆಲೆಗೆ ಸಮಾನು ಖರೀದಿಸುವ ನಾವು ಚಿಕ್ಕ ಚಿಕ್ಕ ಶೋರೂಮ್ ಗಳಲ್ಲಿ ಮಾತ್ರ ಮಾರಾಟಗಾರರು ಹೇಳಿದ ಬೆಲೆಯ ಅರ್ಧದಷ್ಟನ್ನು ಕೊಟ್ಟು ಬರಲು ಅದೆಷ್ಟು ಹೆಮ್ಮೆ ಪಡುತ್ತೇವೆ!!

June 10, 2008

ಮಗಳಿಗಾಗಿ ಪಿತ್ತಜನಕಾಂಗವನ್ನೇ ದಾನ ಮಾಡಿದ ಅಮ್ಮ... ನಿನಗೆ ನೂರಾರೂ ವಂದನೆಗಳು

ಅಮ್ಮ ನೀನೇ ನನ್ನುಸಿರು, ನನ್ನ ಸರ್ವಸ್ವ. ನಿನ್ನಂಥ ಅಮ್ಮನ ಪಡೆಯಲು ನಾನೆಷ್ಟು ಪುಣ್ಯ ಮಾಡಿದ್ದೇನೆ ಎಂದು ನಾವು ಅದೆಷ್ಟೋ ಬಾರಿ ಹೇಳಿದ್ದೇವೆ. ಅಮ್ಮನನ್ನು ನೆನೆದಾಗೆಲ್ಲಾ ಭಾವುಕರಾಗಿದ್ದೇವೆ. ಅಮ್ಮನ ಪ್ರೀತಿ ಕಣ್ಣ ಮುಂದೆ ಬಂದಾಗ ನಮಗೆ ಅರಿವಿಲ್ಲದಂತೆಯೇ ಕಣ್ಣೀರು ಹಾಕಿದ್ದೇವೆ. ಅಮ್ಮನ ಪ್ರೀತಿಯೇ ಅಂಥಾಹುದು. ಕೀಟಲೆ ಮಾಡುವಾಗೆಲ್ಲಾ ನಿನ್ನಂಥ ಮಗಳು ನನಗ್ಯಾಕೆ ಹುಟ್ಟಿದಳೋ ಎಂದು ಬೈಯುವ ಅಮ್ಮ ತನ್ನ ಮಗುವಿಗೆ ಚಿಕ್ಕ ತೊಂದರೆ ಆದರೂ ಮನಸ್ಸಿನೊಳಗೇ ಕಣ್ಣೀರು ಹಾಕುವಳು. ಮಗು ತೊಂದರೆ ಅನುಭವಿಸುವ ಬದಲು ಆ ಪರಿಸ್ಥಿತಿ ತನಗೇ ಬರಬಾರದಿತ್ತೇನೋ ಎಂದು ಹಲುಬುವವಳು.

ಮಹಾರಾಷ್ಟ್ರದ ಒಂದು ಅಮ್ಮನ ಸಾಹಸ ಹೀಗಿದೆ: ಮಹಾರಾಷ್ಟ್ರದ ಶ್ವೇತಾ ಗೋರ್ ತನಗೊಬ್ಬಳು ಮಗಳು ಹುಟ್ಟುತ್ತಾಳೆಂದು ತಿಳಿದು ಹರ್ಷಗೊಂಡು, ತನ್ನನ್ನು ಪರಿಪೂರ್ಣವಾಗಿ ಮಗುವಿನ ಸೇವೆಗಾಗಿ ಮೀಸಲಿಡಬೇಕೆಂದು ಬಯಸಿ ತನ್ನ ಉದ್ಯೋಗವನ್ನೇ ತ್ಯಜಿಸಿದಳು. ತನ್ನೆಲ್ಲಾ ಪ್ರೀತಿಯನ್ನು ಮಗುವಿಗಾಗಿ ಧಾರೆ ಏರೆದಳು. ಆದರೆ ಮಗು ಹುಟ್ಟಿದ ಮುರೇ ದಿನಗಳಲ್ಲಿ ಮಗುವಿಗೆ ಅನಿರೀಕ್ಷಿತವಾದ ಖಾಯಿಲೆಯೊಂದು ಅಂಟಿಕೊಂಡಿತು. ಶ್ವೇತಾ ಕನಸ್ಸಿನಲ್ಲೂ ಊಹಿಸಿರಲಿಲ್ಲ... ಮುಂದೊಂದು ದಿನ ತನ್ನ ಮಗಳು ಪ್ರಾಚಿಗಾಗಿ ತಾನು ಬಹು ದೊಡ್ಡ ಸಾಹಸ ಮಾಡಬೇಕಾಗಿ ಬರಬಹುದೆಂದು!!

ಆದರೆ ಮಗು ಹುಟ್ಟಿದ ಮುರೇ ದಿನಗಳಲ್ಲಿ ಮಗುವಿಗೆ ಅನಿರೀಕ್ಷಿತವಾದ ಖಾಯಿಲೆಯೊಂದು ಅಂಟಿಕೊಂಡಿತು. ಮಗುವಿಗೆ ಅಲಾಜೈಲ್ ಸಿಂಡ್ರೊಮ್ ಮತ್ತು ಕ್ರೊನಿಕ್ ಲಿವರ್ ಎಂಬ ಹೆಸರಿನ ಖಾಯಿಲೆಗಳು ಜೊತೆ ಜೊತೆಯಾಗಿ ಬಂದವು. ಇದರ ಪರಿಣಾಮ ಮಗು ಹಗಲು ರಾತ್ರಿಯೆನ್ನದೇ ತುರಿಕೆಯಲ್ಲೇ ಜೀವನ ಕಳೆಯಬೇಕಾಯಿತು. ಅಷ್ಟೇ ಅಲ್ಲ ಪಿತ್ತ ಜನಕಾಂಗವು ಕ್ಷೀಣಿಸುತ್ತಾ ಹೋಗ ತೊಡಗಿತು.

ನೊಂದ ತಾಯಿ ಶ್ವೇತಾ ತನ್ನ ಪತಿಯಾದ ದಿಯೋದತ್ತಾ (ಈತ ಬೆಂಗಳೂರಿನ ಕಂಪೆನಿಯೊಂದರಲ್ಲಿ ಇಂಜಿನಿಯರ್)ನೊಡನೆ ಸೇರಿ ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಮಗಳು ಪ್ರಾಚಿಯನ್ನು ದಾಖಲಿಸಿದರು. ಅಲ್ಲಿನ ವೈದ್ಯರು ಬಹುಬೇಗನೆ ಕಾರ್ಯ ನಿರ್ವಹಿತರಾಗಿ ಎಲ್ಲವನ್ನೂ ಪರೀಕ್ಷಿಸಿ, ‘ಮಗು ಆರೋಗ್ಯವಂತಳಾಗಬೇಕಾದರೆ ಆರೋಗ್ಯವಂತ ತಂದೆ/ ತಾಯಿಯ ಪಿತ್ತ ಜನಕಾಂಗದ ಭಾಗವೊಂದನ್ನು ಕೊಡಬೇಕೆಂದು’ ತಿಳಿಸಿದರು. ವಿಷಯ ತಿಳಿದ ಶ್ವೇತಾಳು ಸ್ವಲ್ಪವೂ ವಿಚಲಿತಳಾಗದೇ ತನ್ನ ಪಿತ್ತ ಜನಕಾಂಗ (Liver) ವನ್ನೇ ಕೊಟ್ಟಳು. ಸರಿಯಾದ ರೀತಿಯಲ್ಲಿ ವೈದ್ಯರುಗಳು, ಮಣಿಪಾಲ್ ಆಸ್ಪತ್ರೆಯ ಇತರೆ ಸಿಬ್ಬಂದಿ ವರ್ಗದವರ ಸಹಕಾರದಿಂದ ಎಲ್ಲವೂ ಸರಾಗವಾಗಿ ನಡೆಯಿತು.

ಮಗಳಿಗಾಗಿ ಏನೂ ಬೇಕಾದರೂ ಮಾಡಲು ಸಿದ್ದಳಿದ್ದ ಅಮ್ಮ ಶ್ವೇತಾ ಇಂದು ಹುಷಾರಾಗಿದ್ದಾರೆ. ಅವರ ಪ್ರಯತ್ನಗಳು ನಿರಾಶದಾಯಕವಾಗಲಿಲ್ಲ. ಪ್ರಾಚಿಗೆ ಮೊದಲಿನ ತುರಿತವಿಲ್ಲ. ಹಸಿವಿನ ತೊಂದರೆಯಿಲ್ಲ. ರಾತ್ರಿ ಹೊತ್ತು ಆರಾಮವಾಗಿ ನಿದ್ರಿಸುತ್ತಾಳೆ. ಹೆತ್ತವರಿಬ್ಬರೂ ತಮ್ಮ ಮಗಳ ಆರೋಗ್ಯದಾಯಕ ನಾಳೆಗಳಿಗೆ ಸಾಕ್ಷಿಯಾಗಲಿದ್ದಾರೆ.




April 8, 2008

ಸೈಕಲ್ ಕಳ್ಳ (the bicycle thief)

ದಿ ಬೈಸಿಕಲ್ ಥೀಫ್ ಸಿನಿಮಾವು ನೈಜತೆಯಿಂದ ಕೂಡಿದ್ದು, ಅಂತ್ಯದವರೆಗೂ ಕುತೂಹಲವನ್ನು ಉಂಟುಮಾಡುತ್ತದೆ.

ಎರಡನೇ ಮಹಾಯುದ್ದದ ಪೂರ್ವಕಾಲದಲ್ಲಿ ಜನರು ಉದ್ಯೋಗಕ್ಕಾಗಿ ಅಲೆಯುವ ಪರಿ, ಉದ್ಯೋಗ ಲಭಿಸಿದ ಮೇಲೆ ಅದನ್ನು ಉಳಿಕೊಳ್ಳಲು ಒದ್ದಾಡುವ ಪರಿ... ಮುಂತಾದವನ್ನು ವಿಟ್ಟೊರಿ ಡೆ ಸಿಕಾ ಅವರು ಈ ಸಿನಿಮಾದಲ್ಲಿ ತುಂಬಾನೇ ಸೊಗಸಾಗಿ ನಿರೂಪಿಸಿದ್ದಾರೆ.
ಅಂಟೋನಿಯೋ (ನಾಯಕ) ಎರಡನೇ ಮಹಾಯುದ್ದದ ಪೂರ್ವ ಕಾಲದಲ್ಲಿ, ತನ್ನಂತಿರುವ ಹಲವು ನಿರುದ್ಯೋಗಿಗಳಂತೆ ಉದ್ಯೋಗ ಹರಸುತ್ತಿರುವಾಗ, ಒಂದೆಡೆ ಸೈಕಲ್ ಇದ್ದವನಿಗೆ ಉದ್ಯೋಗ ಇರುವ ವಿಷಯ ತಿಳಿದು ಅ ಕೆಲಸ ತನಗೆ ಲಭಿಸಬೇಕೆಂದು ಮನೆಗೆ ತೆರಲಿ ಹೆಂಡತಿಯ ಸಹಾಯದಿಂದ ಮನೆಯಲ್ಲಿದ್ದ ಬೆಡ್ ಶೀಟ್ ಮುಂತಾದವುಗಳನ್ನು ಮಾರಿ ಹೊಸದಾದ ಸೈಕಲ್ ಒಂದನ್ನು ಖರೀದಿಸುತ್ತಾನೆ. ಜೊತೆಗೆ ಉದ್ಯೋಗವನ್ನೂ ಪಡೆಯುತ್ತಾನೆ.



ಮೊದಲ ದಿನ ಸೈಕಲ್ಲನ್ನು ಪಕ್ಕದಲ್ಲಿಟ್ಟು, ತನ್ನ ಕೆಲಸ ಪ್ರಾರಂಭಿಸುವಾಗ ಒಬ್ಬ ಕಳ್ಳ ಬಂದು ಸೈಕಲ್ಲನ್ನು ಅಪಹರಿಸುತ್ತಾನೆ. ಇದರಿಂದ ವಿಚಲಿತನಾದ ಅಂಟೋನಿಯೋ ಕೆಲಸವನ್ನು ಅಲ್ಲೇ ನಿಲ್ಲಿಸಿ ಸೈಕಲ್ ಕದ್ದ ಕಳ್ಳನ ಹಿಂದೆ ಓಡುತ್ತಾನೆ.
ತನ್ನ ಮಗನ ಜೊತೆ ಸೇರಿ ಸೈಕಲ್ ಹುಡುಕುವ ಪರಿ ರೋಚಕವಾದದು. ಸೈಕಲ್ ಕಳ್ಳನ ಗುರುತು ಹಿಡಿದು ಆತನ ಮನೆಗೆ ಹೋಗಿ ಸೈಕಲ್ ಹುಡುಕಲು ಹೊರಟಾಗ ಅವರಿಗೆ ಕಂಡಿದ್ದು ಸೈಕಲ್ ಕಳ್ಳನ ಬಡತನ. ಸೈಕಲ್ ಅಲ್ಲೂ ಇರುವುದಿಲ್ಲ.

ಸೈಕಲ್ಲಿನ ಬಿಡಿಭಾಗಗಳನ್ನು ಮಾರಿರಬಹುದೆಂಬ ಗುಮಾನಿ ಮೇರೆಗೆ, ಸೈಕಲ್ ಬಿಡಿಭಾಗಗಳನ್ನು ಮಾರುವ ಶಾಪ್ ಗಳಿಗೆ ಹೋಗಿ ಹುಡುಕಾಡುತ್ತಾರೆ.ಅಲ್ಲೂ ಸಿಗದಾಗ ತೀರ ನಿರಾಶಿತನಾಗುತ್ತಾನೆ. ಒಂದು ಸಾರಿ ಅಂಟೋನಿಯೋ ಬೇರೆಯೊಬ್ಬನ ಸೈಕಲ್ ಕದಿಯುವ ಸಾಹಸಕ್ಕೆ ಕೈ ಹಾಕಿ, ಅದರಲ್ಲಿ ಸಿಕ್ಕಿಹಾಕಿ ಎಲ್ಲರಿಂದ ಒದೆ ತಿನ್ನುತ್ತಾನೆ.
ಮಳೆ, ಬಿಸಿಲು, ಹಸಿವು ಯಾವುದನ್ನೂ ಲೆಕ್ಕಿಸದೆ ತನ್ನ ಮಗನೊಡನೆ ಸೈಕಲ್ ಹುಡುಕುವ ಪ್ರಯತ್ನ ಸೋಜಿಗವಾದುದು. ಚರ್ಚ್ ಗೆ ಹೋದರೂ ಅವರ ಮನವೆಲ್ಲಾ ಸೈಕಲ್ ನತ್ತಲೇ ಇರುತ್ತದೆ. ಭವಿಷ್ಯ ಹೇಳುವವರ ಹತ್ತಿರನೂ ಹೋಗಿ ತನ್ನ ಸೈಕಲ್ ಸಿಗಬಹುದೇ ಎಂದು ನಾಯಕ ಕೇಳುವಾಗ ಅಯ್ಯೋ ಅನ್ನಿಸುತ್ತೆ.
ಚಿತ್ರದ ಕೊನೆಗೂ ಅಂಟೋನಿಯೋಗೆ ತನ್ನ ಸೈಕಲನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಸೈಕಲ್ ಸಿಕ್ಕರೆ ತನ್ನ ಬಡತನವನ್ನು ಗೆಲ್ಲಬಹುದು ಎಂಬ ನಾಯಕನ ಕನಸ್ಸು ಕನಸ್ಸಾಗಿಯೇ ಉಳಿಯುತ್ತದೆ. ಅಂಟೋನಿಯೋ ಮಗನಂತೂ ಸೈಕಲ್ಲನ್ನು ಒಂದೇ ಬಾರಿ ನೋಡಿದ್ದರೂ ಅದರ ಪ್ರತೀ ಭಾಗವನ್ನು ತನ್ನಲ್ಲಿ ನೆನಪಿಟ್ಟುಕೊಂಡಿರುತ್ತಾನೆ. ಇವೆಲ್ಲ ಸೈಕಲ್ ಹುಡುಕುವ ಅವರ ಪರಿಶ್ರಮದಲ್ಲಿ ವ್ಯಕ್ತವಾಗುತ್ತದೆ.
ಒಟ್ಟಾರೆಯಾಗಿ ಒಮ್ಮೆ ನೋಡಿದರೆ ಸದಾಕಾಲ ನೆನಪಿನಲ್ಲಿ ಉಳಿಯುವಂತಹ, ಹಂತ ಹಂತದಲ್ಲೂ ಕುತೂಹಲಮುಡಿಸುವ ಸಿನಿಮಾ ಇದಾಗಿದೆ.

March 18, 2008

ಬ್ಲಾಗರ್ಸ್ ಮಿಲನ

ಮಾರ್ಚ್ ೧೬, ೨೦೦೮ ರಂದು ಬೆಂಗಳೂರಿನಲ್ಲಿ ಮಿನಿ ದಾಖಲೆಯೊಂದನ್ನು ಪ್ರಣತಿ ಮಾಡಿತ್ತು. ಕರ್ನಾಟಕದ ಬ್ಲಾಗರ್ಸ್ ಗಳನ್ನು ಬೇಟಿಯಾಗುವ ಸದಾವಕಾಶವನ್ನು ಅದು ನಮಗೆಲ್ಲಾ ನೀಡಿತ್ತು. ಅಷ್ಟೇ ಅಲ್ಲ ಬ್ಲಾಗ್ ನಿಂದ ವೆಬ್ ಸೈಟ್ಗೆ ಹೋಗುವ ಬಗೆ, ಕನ್ನಡದಲ್ಲೇ ಎಸ್ ಎಂ ಎಸ್ ಮಾಡುವ ಸಾಹಸ ಮಾತ್ರವಲ್ಲದೇ ಲಿನಕ್ಸ್, ಜಾವಾ ಮುಂತಾದ ಕ್ಲಿಷ್ಟಕರವಾದ ಟೆಕ್ನಿಕಲ್ ವಿಷಯಗಳೂ ತಿಳಿಯುವಂತಾಯಿತು. ಪ್ರಣತಿ ತಂಡವೇ ಆಶ್ಚರ್ಯ ಪಡುವಂತೆ ಬ್ಲಾಗರ್ಸ್ ನೆರೆದಿದ್ದರು.

ಎಲ್ಲರಲ್ಲೂ ಹೊಸ ಉತ್ಸಾಹ, ಸಂತಸ, ಹುರುಪು ಇತರರನ್ನು ಪರಿಚಯಿಸುವ ತವಕ ಎದ್ದು ಕಾಣುತ್ತಿತ್ತು.

ಕೆಂಡಸಂಪಿಗೆಯ ಅಬ್ದುಲ್ ರಶೀದ್ ಅವರನ್ನು ಮೊದಲೇ ಭೇಟಿಯಾಗಿದ್ದೆ. ಆದರೆ ಸಂಪದದ ನಾಡಿಗ್, ದಟ್ಸ್ ಕನ್ನಡದ ಶ್ಯಾಮ್, ವಿಶ್ವ ಕನ್ನಡದ ಪವನಜ ಸಹಿತ ನಿಮ್ಮೆಲ್ಲರನ್ನೂ ಮುಖತಃ ಭೇಟಿ ಆಗುವ ಅವಕಾಶ ಇಷ್ಟು ಬೇಗ ಲಭಿಸಬಹುದೆಂದು ನಾನು ನಿರೀಕ್ಷಿಸಿರಲಿಲ್ಲ.

ಅದ್ರೂ ನಿರಾಶೆಯಾಯಿತು...

ಮೊದಲ ಭೇಟಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಅವಶ್ಯ ವೆನ್ನಿಸಿದ ಮಾಹಿತಿಗಳನ್ನು ನೀಡಿದ್ದೇನೋ ಸರಿ ಆದ್ರೆ...

ಎಲ್ಲರ ಪರಿಚಯ ಮಾಡಲು ಪ್ರಣತಿ ಒಂದು ಅವಕಾಶ ಕಲ್ಪಿಸಿದ್ದರೆ....?

ಕಾರ್ಯಕ್ರಮಕ್ಕೆ ಒಂದು ಕಳೆ ಬರುತ್ತಿತ್ತು. ಗುಂಪು ಚಟುವಟಿಕೆ ಮುಂತಾದವುಗಳ ಮುಖಾಂತರ ಒಬ್ಬರಿಗೊಬ್ಬರ ಪರಿಚಯ ಮಾಡಿಸುತ್ತಿದ್ದರೆ ಪ್ರಣತಿಗೆ ಡಬ್ಬಲ್ ಕ್ರೆಡಿಟ್ ಬರುತ್ತಿತ್ತೇನೋ...

ಪರವಾಗಿಲ್ಲ ... ಮುಂದಿನ ಬಾರಿ ಪ್ರಣತಿ ತಂಡ ಅಂಥಹ ಲೋಪಗಳಿಗೆ ಅವಕಾಶ ಕೊಡಲ್ಲ ಹಾಗೂ ಬಹು ಬೇಗನೇ ಮಗದೊಂದು ಬ್ಲಾಗರ್ಸ್ ಮಿಲನವನ್ನು ಹಮ್ಮಿಕೊಳ್ಳುತ್ತದೆ ಎಂಬ ಆಶಯ ನನ್ನದು. ಅ ದಿನ ನಾವೆಲ್ಲ ಮತ್ತೆ ಭೇಟಿಯಾಗೋಣ... ಅಲ್ಲಿಯವರೆಗೆ ಇದೇ ಅಂತರ್ಜಾಲದಲ್ಲಿ ಭೇಟಿಯಾಗುತ್ತಿರೋಣ...

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...