April 8, 2008

ಸೈಕಲ್ ಕಳ್ಳ (the bicycle thief)

ದಿ ಬೈಸಿಕಲ್ ಥೀಫ್ ಸಿನಿಮಾವು ನೈಜತೆಯಿಂದ ಕೂಡಿದ್ದು, ಅಂತ್ಯದವರೆಗೂ ಕುತೂಹಲವನ್ನು ಉಂಟುಮಾಡುತ್ತದೆ.

ಎರಡನೇ ಮಹಾಯುದ್ದದ ಪೂರ್ವಕಾಲದಲ್ಲಿ ಜನರು ಉದ್ಯೋಗಕ್ಕಾಗಿ ಅಲೆಯುವ ಪರಿ, ಉದ್ಯೋಗ ಲಭಿಸಿದ ಮೇಲೆ ಅದನ್ನು ಉಳಿಕೊಳ್ಳಲು ಒದ್ದಾಡುವ ಪರಿ... ಮುಂತಾದವನ್ನು ವಿಟ್ಟೊರಿ ಡೆ ಸಿಕಾ ಅವರು ಈ ಸಿನಿಮಾದಲ್ಲಿ ತುಂಬಾನೇ ಸೊಗಸಾಗಿ ನಿರೂಪಿಸಿದ್ದಾರೆ.
ಅಂಟೋನಿಯೋ (ನಾಯಕ) ಎರಡನೇ ಮಹಾಯುದ್ದದ ಪೂರ್ವ ಕಾಲದಲ್ಲಿ, ತನ್ನಂತಿರುವ ಹಲವು ನಿರುದ್ಯೋಗಿಗಳಂತೆ ಉದ್ಯೋಗ ಹರಸುತ್ತಿರುವಾಗ, ಒಂದೆಡೆ ಸೈಕಲ್ ಇದ್ದವನಿಗೆ ಉದ್ಯೋಗ ಇರುವ ವಿಷಯ ತಿಳಿದು ಅ ಕೆಲಸ ತನಗೆ ಲಭಿಸಬೇಕೆಂದು ಮನೆಗೆ ತೆರಲಿ ಹೆಂಡತಿಯ ಸಹಾಯದಿಂದ ಮನೆಯಲ್ಲಿದ್ದ ಬೆಡ್ ಶೀಟ್ ಮುಂತಾದವುಗಳನ್ನು ಮಾರಿ ಹೊಸದಾದ ಸೈಕಲ್ ಒಂದನ್ನು ಖರೀದಿಸುತ್ತಾನೆ. ಜೊತೆಗೆ ಉದ್ಯೋಗವನ್ನೂ ಪಡೆಯುತ್ತಾನೆ.



ಮೊದಲ ದಿನ ಸೈಕಲ್ಲನ್ನು ಪಕ್ಕದಲ್ಲಿಟ್ಟು, ತನ್ನ ಕೆಲಸ ಪ್ರಾರಂಭಿಸುವಾಗ ಒಬ್ಬ ಕಳ್ಳ ಬಂದು ಸೈಕಲ್ಲನ್ನು ಅಪಹರಿಸುತ್ತಾನೆ. ಇದರಿಂದ ವಿಚಲಿತನಾದ ಅಂಟೋನಿಯೋ ಕೆಲಸವನ್ನು ಅಲ್ಲೇ ನಿಲ್ಲಿಸಿ ಸೈಕಲ್ ಕದ್ದ ಕಳ್ಳನ ಹಿಂದೆ ಓಡುತ್ತಾನೆ.
ತನ್ನ ಮಗನ ಜೊತೆ ಸೇರಿ ಸೈಕಲ್ ಹುಡುಕುವ ಪರಿ ರೋಚಕವಾದದು. ಸೈಕಲ್ ಕಳ್ಳನ ಗುರುತು ಹಿಡಿದು ಆತನ ಮನೆಗೆ ಹೋಗಿ ಸೈಕಲ್ ಹುಡುಕಲು ಹೊರಟಾಗ ಅವರಿಗೆ ಕಂಡಿದ್ದು ಸೈಕಲ್ ಕಳ್ಳನ ಬಡತನ. ಸೈಕಲ್ ಅಲ್ಲೂ ಇರುವುದಿಲ್ಲ.

ಸೈಕಲ್ಲಿನ ಬಿಡಿಭಾಗಗಳನ್ನು ಮಾರಿರಬಹುದೆಂಬ ಗುಮಾನಿ ಮೇರೆಗೆ, ಸೈಕಲ್ ಬಿಡಿಭಾಗಗಳನ್ನು ಮಾರುವ ಶಾಪ್ ಗಳಿಗೆ ಹೋಗಿ ಹುಡುಕಾಡುತ್ತಾರೆ.ಅಲ್ಲೂ ಸಿಗದಾಗ ತೀರ ನಿರಾಶಿತನಾಗುತ್ತಾನೆ. ಒಂದು ಸಾರಿ ಅಂಟೋನಿಯೋ ಬೇರೆಯೊಬ್ಬನ ಸೈಕಲ್ ಕದಿಯುವ ಸಾಹಸಕ್ಕೆ ಕೈ ಹಾಕಿ, ಅದರಲ್ಲಿ ಸಿಕ್ಕಿಹಾಕಿ ಎಲ್ಲರಿಂದ ಒದೆ ತಿನ್ನುತ್ತಾನೆ.
ಮಳೆ, ಬಿಸಿಲು, ಹಸಿವು ಯಾವುದನ್ನೂ ಲೆಕ್ಕಿಸದೆ ತನ್ನ ಮಗನೊಡನೆ ಸೈಕಲ್ ಹುಡುಕುವ ಪ್ರಯತ್ನ ಸೋಜಿಗವಾದುದು. ಚರ್ಚ್ ಗೆ ಹೋದರೂ ಅವರ ಮನವೆಲ್ಲಾ ಸೈಕಲ್ ನತ್ತಲೇ ಇರುತ್ತದೆ. ಭವಿಷ್ಯ ಹೇಳುವವರ ಹತ್ತಿರನೂ ಹೋಗಿ ತನ್ನ ಸೈಕಲ್ ಸಿಗಬಹುದೇ ಎಂದು ನಾಯಕ ಕೇಳುವಾಗ ಅಯ್ಯೋ ಅನ್ನಿಸುತ್ತೆ.
ಚಿತ್ರದ ಕೊನೆಗೂ ಅಂಟೋನಿಯೋಗೆ ತನ್ನ ಸೈಕಲನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಸೈಕಲ್ ಸಿಕ್ಕರೆ ತನ್ನ ಬಡತನವನ್ನು ಗೆಲ್ಲಬಹುದು ಎಂಬ ನಾಯಕನ ಕನಸ್ಸು ಕನಸ್ಸಾಗಿಯೇ ಉಳಿಯುತ್ತದೆ. ಅಂಟೋನಿಯೋ ಮಗನಂತೂ ಸೈಕಲ್ಲನ್ನು ಒಂದೇ ಬಾರಿ ನೋಡಿದ್ದರೂ ಅದರ ಪ್ರತೀ ಭಾಗವನ್ನು ತನ್ನಲ್ಲಿ ನೆನಪಿಟ್ಟುಕೊಂಡಿರುತ್ತಾನೆ. ಇವೆಲ್ಲ ಸೈಕಲ್ ಹುಡುಕುವ ಅವರ ಪರಿಶ್ರಮದಲ್ಲಿ ವ್ಯಕ್ತವಾಗುತ್ತದೆ.
ಒಟ್ಟಾರೆಯಾಗಿ ಒಮ್ಮೆ ನೋಡಿದರೆ ಸದಾಕಾಲ ನೆನಪಿನಲ್ಲಿ ಉಳಿಯುವಂತಹ, ಹಂತ ಹಂತದಲ್ಲೂ ಕುತೂಹಲಮುಡಿಸುವ ಸಿನಿಮಾ ಇದಾಗಿದೆ.

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...