December 6, 2008

ಚುಮುಚುಮು ಚಳಿಯ ಜತೆ ಕ್ರಿಸ್ ಮಸ್ ಸಂಭ್ರಮ

ಡಿಸೆಂಬರ್ ತಿಂಗಳು ಬಂತೆಂದರೆ ಚಳಿ ಹೆಚ್ಚುತ್ತಿರುತ್ತದೆ. ಮಕ್ಕಳಿಗೆ ಶಾಲೆಗೆ ಹೋಗಲು ಇಷ್ಟವಿಲ್ಲ. ಬದಲಾಗಿ ಕ್ರಿಸ್ ಮಸ್ ತಯಾರಿ ನಡೆಸಲು ಎಲ್ಲಿಲ್ಲದ ಆಸಕ್ತಿ. ಉದ್ಯೋಗಿಗಳಂತೂ ಶಾಪಿಂಗ್ ಗಾಗಿ ಒಂದು ವಾರ ರಜೆ ಪಡೆಯುತ್ತಾರೆ. ವಿದೇಶದಲ್ಲಿದ್ದ ಸ್ನೇಹಿತರೆಲ್ಲಾ ಕ್ರಿಸ್ ಮಸ್ ಆಚರಣೆಗಾಗಿ ಹುಟ್ಟೂರಿಗೆ ಆಗಮಿಸುತ್ತಾರೆ.
ಕ್ರೈಸ್ತರಿಗೆ ಕ್ರಿಸ್ ಮಸ್ ಅಂದರೆ ಯೇಸುವಿನ ಜನನದ ಸಂಭ್ರಮವನ್ನು ತಮ್ಮ ಹುಟ್ಟೂರಿನಲ್ಲೇ ಆಚರಿಸುವ ತವಕ.
೨೦೪೧ ವರ್ಷಗಳ ಹಿಂದೆ ಜೆರುಸಲೇಮಿನ ಬೆತ್ಲೆಹೆಮ್ ಎಂಬ ಶಹರದ ಗೋದಲಿಯೊಂದರಲ್ಲಿ ಮೇರಿ ಹಾಗೂ ಸಂತ ಜೋಸೆಫ್ ಅವರ ಮಗುವಾಗಿ ಡಿ. ೨೫ ರಂದು ಯೇಸುವಿನ ಜನನವಾಯಿತು. ಅಂದು ದೇವದೂತರು, ದನಕಾಯುವವರು ಅಷ್ಟೇ ಅಲ್ಲ, ಎಲ್ಲ ಜೀವಿಗಳು ಸಂಭ್ರಮಪಟ್ಟವು. ಮುರು ಮಂದಿ ರಾಜರುಗಳು ತಮ್ಮ ಕಾಣಿಕೆಗಳೊಡನೆ ನಕ್ಷತ್ರದ ಸಹಾಯದಿಂದ ಯೇಸುವನ್ನು ನೋಡಲು ಹೋಗಿದ್ದರು.


ಈ ನೆನಪಿನಲ್ಲೇ ಕ್ರೈಸ್ತರು ಗೋದಲಿ ನಿರ್ಮಿಸುತ್ತಾರೆ. ನಕ್ಷತ್ರ ತೂಗುತ್ತಾರೆ, ಬಾಲ ಯೇಸುವಿನ ಶಿಲ್ಪವನ್ನಿಟ್ಟು ಅಕ್ಕ ಪಕ್ಕದಲ್ಲಿ ಸಂತ ಜೋಸೆಫ್, ಮೇರಿ ಮಾತೆಯ ಪ್ರತಿಮೆಯನ್ನಿಡುತ್ತಾರೆ. ‘ಕ್ರಿಸ್ ಮಸ್ ಟ್ರೀ’ ಕುರಿತಾಗಿ ಹೇಳುವುದಾದರೆ ಕ್ರಿಸ್ ಮಸ್ ಸಂಭ್ರಮವನ್ನು ಹೆಚ್ಚಿಸುವ ಉದ್ದೇಶದಿಂದ ಸಂತ ಫ್ರಾನ್ಸಿಸ್ ಅಸ್ಸಿಸಿ ಎಂಬವರು ಮೊದಲ ಬಾರಿಗೆ ಕ್ರಿಸ್ಮಸ್ ಟ್ರೀ ಮಾಡಿದರು. ಮುಂದೆ ಈ ಆಚರಣೆ ಪ್ರಪಂಚದಲ್ಲೆಡೆ ಪಸರಿಸಿತು.

ಸಂತ ನಿಕೋಲಸ್ ಎಂಬಾತ ಕ್ರಿಸ್ಮಸ್ ದಿನದಂದು ಬಡವರಿಗಾಗಿ ಕಾಣಿಕೆಗಳನ್ನು ಕೊಡುತ್ತಿದ್ದರು. ಅವರು ತಮ್ಮ ವಿಶಿಷ್ಟ ಉಡುಗೆಯಿಂದ ಮಕ್ಕಳ ಮನಗೆದ್ದರು. ಅವರ ನೆನಪಿಗಾಗಿ ಸಾಂತಾ ಕ್ಲಾಸ್ ಈಗಲೂ ಡಿಸೆಂಬರ್ ತಿಂಗಳಲ್ಲಿ ನಮ್ಮ ಮನೆಮುಂದೆ ಪ್ರತ್ಯಕ್ಷರಾಗುತ್ತಾರೆ.


ಕರಾವಳಿ ಕ್ರೈಸ್ತರು ತಯಾರಿಸುವ ಕ್ರಿಸ್ಮಸ್ ತಿಂಡಿಗೆ ‘ಕುಸ್ವಾರ್’ ಎಂದು ಹೆಸರು. ಕ್ರಿಸ್ಮಸ್ ಕೇಕ್ ಇಲ್ಲಿನ ಯಜಮಾನ. ಕಿಡಿಯೊ, ಗುಳಿಯೊ, ನಿವ್ರ್ಯೊ, ಕ್ಕೊಕ್ಕಿಸಾ, ಲಾಡು, ತುಕ್ಡಿ, ಚಕ್ಕುಲಿ, ಚಿಪ್ಸ್ ಇವೆಲ್ಲವನ್ನು ಮನೆಯಲ್ಲೇ ತಯಾರಿಸಿ ನಂತರ ನೆರೆಹೊರೆ ಹಾಗೂ ಸ್ನೇಹಿತರಿಗೆ ಹಂಚಿ ಸಂಭ್ರಮಿಸುವುದು ಪರಸ್ಪರರ ನಡುವೆ ಆತ್ನೀಯತೆ ಹೆಚ್ಚಿಸಲು ಸಹಕಾರಿ.
ಕ್ರಿಸ್ ಮಸ್ ಕುರಿತ ಸಂದೇಶ ನೀಡುವ ಗ್ರೀಟಿಂಗ್ಸ್ ಕಾರ್ಡ್ ಗಳನ್ನು ಪರಸ್ಪರ ರವಾನಿಸುವುದು, ಶಾಲಾ ಕಾಲೇಜುಗಳಲ್ಲಿ ‘ಕ್ರಿಸ್ ಮಸ್ ಫ್ರೆಂಡ್’ ಆಚರಿಸುವುದು ಇವೆಲ್ಲಾ ಕ್ರಿಸ್ ಮಸ್ ಸಡಗರವನ್ನು ಹೆಚ್ಚಿಸುತ್ತಿದೆ. ಉಳಿದಂತೆ ಹೊಸ ವಿನ್ಯಾಸದ ಹೊಸ ಉಡುಗೆ ತೊಡುಗೆ ಧರಿಸಿ ಡಿ. ೨೪ರ ರಾತ್ರಿ ಚರ್ಚ್ ಗಳಲ್ಲಿ ಪೂಜಾ ಸಮಾರಂಭದಲ್ಲಿ ಭಾಗಿಯಾಗುವುದು. ಪೂಜಾ ಬಲಿದಾನ ನಂತರ ಪರಸ್ಪರ ಕ್ರಿಸ್ಮಸ್ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಕ್ರಿಸ್ಮಸ್ ಹಾಡುಗಳಿಗೆ (ಕ್ಯಾರಲ್ಸ್) ಸಾಂತಾ ಕ್ಲಾಸ್ ಜತೆಗೆ ಕುಣಿಯುವುದು. ಡಿಸೆಂಬರ್ ೨೫ ರಿಂದ ಕ್ಯಾರಲ್ಸ್ ಜತೆಗೆ ಸಾಂತಾಕ್ಲಾಸ್ ಮನೆಮನೆಗೆ ಆಗಮಿಸಿ ಸಂತಸ ಹಂಚಿಕೊಳ್ಳುವುದು.
ಕುಸ್ವಾರ್, ಕ್ರಿಸ್ಮಸ್ ಟ್ರೀ, ಗೋದಲಿ ಮುಂತಾದವುಗಳನ್ನು ಚೆನ್ನಾಗಿ ಮಾಡಿದ್ದವರಿಗೆ ಬಹುಮಾನಗಳನ್ನು ವಿತರಿಸುವ ಕಾರ್ಯಕ್ರಮಗಳು ಇತ್ತೀಚೆಗೆ ಹೆಚ್ಚುತ್ತಿದೆ.
ಇದು ಕ್ರೈಸ್ತ ಬಾಂಧವರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಕ್ರಿಸ್ ಮಸ್ ದಿನಾಚರಣೆಯ ಮೌಲ್ಯಗಳನ್ನು ತಿಳಿಯಲು ಅನುವು ಮಾಡಿಕೊಡುತ್ತಿದೆ.
ಮಾರಾಟಗಾರರಿಗಂತೂ ಡಿಸೆಂಬರ್ ತಿಂಗಳು ಬಂತೆಂದರೆ ರಸದೌತಣ. ಬಹುಶ: ವರ್ಷದಲ್ಲಿ ಅತೀ ಹೆಚ್ಚು ವಸ್ತುಗಳಿಗೆ ಬೇಡಿಕೆ ಇರುವ ಏಕೈಕ ತಿಂಗಳು ಡಿಸೆಂಬರ್.

ಮನೆಗೆ ಮರು ಪೈಂಟ್ ಹಾಕಿ ಮನೆಯನ್ನು ಅಲಂಕರಿಸುವುದು, ಬಗೆಬಗೆಯ ನಕ್ಷತ್ರಗಳನ್ನು, ವಿದ್ಯುತ್ ದೀಪಗಳನ್ನು ಖರೀದಿಸುವುದು, ಮೊಬೈಲ್ ಗಳಲ್ಲಿ ಜಿಂಗಲ್ ಬೆಲ್ಸ್ ಕುರಿತ ರಿಂಗ್ ಟೋನ್ ಹಾಕುವುದು, ಕ್ರಿಸ್ಮಸ್ ಗಾಗಿಯೇ ರಚಿಸಿರುವ ಹಾಡುಗಳನ್ನು ಹಾಡುವುದು ಕ್ರಿಸ್ತ ಜಯಂತಿಯ ಸಂಭ್ರಮದಲ್ಲಿ ಸೇರಿದೆ.

October 28, 2008

ದೀಪಾವಳಿ ಮಜಾನೇ ಬೇರೆ

ಬಣ್ಣ ಬಣ್ಣದ ಪಟಾಕಿಗಳ ಸದ್ದು...

ಒಂದೆಡೆ ವಾಯು ಮಾಲಿನ್ಯ ಇನ್ನೊಂದೆಡೆ ಶಬ್ದ ಮಾಲಿನ್ಯ ಆಗುತ್ತಿದ್ದರೂ ದೀಪಾವಳಿ ಪಟಾಕಿ ಸುಡುವುದರಲ್ಲಿರುವ ಮಜಾನೇ ಬೇರೆ. ಪಟಾಕಿ ಸುಡುವಾಗ ಏನೋ ಒಂಥರಾ ಮಜಾ... ಮನಸ್ಸಿಗೆ ಉಲ್ಲಾಸ ಸಂಭ್ರಮ. ಏನನ್ನೋ ಗೆದ್ದುಕೊಂಡ ಸಂಭ್ರಮ.
ಪತ್ರಿಕೆಗಳಿಗೆ ವಿಶೇಷ ಸಂಚಿಕೆ ಜೊತೆಗೆ ವಾರ್ಷಿಕ magazine (ದೀಪಾವಳಿ ವಿಶೇಷಾಂಕ) ಹೊರ ತರುವ ಸಂಭ್ರಮ... ಜಾಹೀರಾತುದಾರರಿಗಂತೂ ಸುಗ್ಗಿಯೋ ಸುಗ್ಗಿ... ಟಿವಿ ಮತ್ತು ರೇಡಿಯೋದಲ್ಲಿ ಹಬ್ಬದ ವಿಶೇಷ ಕಾರ್ಯಕ್ರಮಗಳ ಪ್ರಸಾರ

ಎಲ್ಲೆಲ್ಲಿ ನೋಡಿದರೂ ಸಂಭ್ರಮ... ರಾತ್ರಿ ಹೊತ್ತು ಆಕಾಶದೆಡೆಗೆ ಕಣ್ಣು ಹಾಯಿಸಿದರೆ ವ್ಹಾ... ರಸದೌತಣ... ವಿನೂತನ ಜಗತ್ತಿಗೆ ಪಯಣಿಸಿದ ಅನುಭವ... ಪ್ರತೀ ದಿನ ದೀಪಾವಳಿ ಹಾಗಿರಬಾರದೇ ಎನ್ನೊ ಹಂಬಲ.

August 14, 2008

ನಾವು ಸ್ವತಂತ್ರರು ಅಂತಾರೆ ಎಲ್ಲಾ..


ಸ್ವಾತಂತ್ರ್ಯ ದಿನಾಚರಣೆಯಂದು ಮನೆಯಿಂದ ಹೊರಬರಲು ನಮಗೆ ಬಾಂಬ್ ಸ್ಪೋಟವಾದಿತೆಂಬ ಭಯ. ಆದ್ರೂ ನಾವು ಸ್ವತಂತ್ರರು :)

ತಿಂಗಳ ಹಿಂದೆ ಅದೆಷ್ಟು ಮಂದಿ ಈ ಬಾರಿ ಸ್ವಾತಂತ್ರ್ಯ ದಿನದಂದು ಊರಿಗೆ ಹೋಗಬೇಕು, ಸ್ನೇಹಿತರನ್ನು ಸಂದರ್ಶಿಸಬೇಕು, ಹಳೆ ಶಾಲೆ / ಕಾಲೇಜಿಗೆ ಹೋಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ಶಾಪಿಂಗ್ ಮಾಡಬೇಕು(ಸ್ಪೇಷಲ್ ಆಫರ್ ಇರುತ್ತಲ್ಲ) ಎಂದೆಲ್ಲಾ ಮುಂದಾಲೋಚನೆ ಮಾಡಿರುವವರು ಕಳೆದ ಕೆಲವು ಶುಕ್ರವಾರಗಳಲ್ಲಿ ನಡೆದಂತಹ ಭಯೋತ್ಪಾದಕ ದಾಳಿಗೆ ಹೆದರಿ ‘ಬದುಕಿತು ಬಡಜೀವ’ ಎಂದು ಮನೆಯಲ್ಲೇ ಇರಲು ಒಲ್ಲದ ಮನಸ್ಸಿನಿಂದ ನಿರ್ಧರಿಸಿದ್ದಾರೆ.


ನಾವು ನಿಜಕ್ಕೂ ಸ್ವತಂತ್ರರೇ?


ರಾಜಾರೋಷವಾಗಿ ಸಿಗರೇಟು ಸೇದುವುದು, ಡ್ರಗ್ಸ್ ತೆಗೆದುಕೊಳ್ಳುವುದು, ಇತರರನ್ನು ಕೆಣಕುವುದು, ಕೋಮುವಾದ ಸ್ರಷ್ಟಿಸುವುದು... ಮುಂತಾದವುಗಳನ್ನು ಮಾಡುತ್ತಾ ಬದುಕುವುದೂ ಸ್ವತಂತ್ರ ಬದುಕೇ?


ಹೊಡಿಬಡಿಯುವುದು, ಮಜಾ ಅನುಭವಿಸುವುದು ಇವೂ ಸ್ವತಂತ್ರ್ಯದ ಪ್ರಮುಖ ಅಂಶಗಳಾಗಿಬಿಟ್ಟವೇ?
ಸ್ವತಂತ್ರ್ಯಾ ದಿನಾಚರಣೆ ಎಂದರೆ ರಾಷ್ಟ್ರಧ್ವಜವನ್ನು ಮೈಯಲ್ಲೆಲ್ಲಾ ಹಾಕಿ ಪಬ್ ಕ್ಲಬ್ ಗಳಲ್ಲಿ ಕುಣಿಯುವುದೇ?

ನಮ್ಮ ದೇಶದಲ್ಲಿರುವ ಅನಾಥಾಶ್ರಮ, ಆಸ್ಪತ್ರೆ ಅಥವಾ ಜೈಲುಗಳಿಗೆ ನಾವೆಷ್ಟು ಬಾರಿ ಸಂದರ್ಶಿಸಲು ಪ್ರಯತ್ನಿಸಿದ್ದೇವೆ? ರಕ್ತದಾನ ಮಾಡಲು ನಾವೆಷ್ಟು ಬಾರಿ ಮುಂದೆ ಬಂದಿದ್ದೇವೆ? ದೊಡ್ಡ ದೊಡ್ಡ ಮಾಲ್ ಗಳಲ್ಲಿ ಹೇಳಿದ ಬೆಲೆಗೆ ಸಮಾನು ಖರೀದಿಸುವ ನಾವು ಚಿಕ್ಕ ಚಿಕ್ಕ ಶೋರೂಮ್ ಗಳಲ್ಲಿ ಮಾತ್ರ ಮಾರಾಟಗಾರರು ಹೇಳಿದ ಬೆಲೆಯ ಅರ್ಧದಷ್ಟನ್ನು ಕೊಟ್ಟು ಬರಲು ಅದೆಷ್ಟು ಹೆಮ್ಮೆ ಪಡುತ್ತೇವೆ!!

June 10, 2008

ಮಗಳಿಗಾಗಿ ಪಿತ್ತಜನಕಾಂಗವನ್ನೇ ದಾನ ಮಾಡಿದ ಅಮ್ಮ... ನಿನಗೆ ನೂರಾರೂ ವಂದನೆಗಳು

ಅಮ್ಮ ನೀನೇ ನನ್ನುಸಿರು, ನನ್ನ ಸರ್ವಸ್ವ. ನಿನ್ನಂಥ ಅಮ್ಮನ ಪಡೆಯಲು ನಾನೆಷ್ಟು ಪುಣ್ಯ ಮಾಡಿದ್ದೇನೆ ಎಂದು ನಾವು ಅದೆಷ್ಟೋ ಬಾರಿ ಹೇಳಿದ್ದೇವೆ. ಅಮ್ಮನನ್ನು ನೆನೆದಾಗೆಲ್ಲಾ ಭಾವುಕರಾಗಿದ್ದೇವೆ. ಅಮ್ಮನ ಪ್ರೀತಿ ಕಣ್ಣ ಮುಂದೆ ಬಂದಾಗ ನಮಗೆ ಅರಿವಿಲ್ಲದಂತೆಯೇ ಕಣ್ಣೀರು ಹಾಕಿದ್ದೇವೆ. ಅಮ್ಮನ ಪ್ರೀತಿಯೇ ಅಂಥಾಹುದು. ಕೀಟಲೆ ಮಾಡುವಾಗೆಲ್ಲಾ ನಿನ್ನಂಥ ಮಗಳು ನನಗ್ಯಾಕೆ ಹುಟ್ಟಿದಳೋ ಎಂದು ಬೈಯುವ ಅಮ್ಮ ತನ್ನ ಮಗುವಿಗೆ ಚಿಕ್ಕ ತೊಂದರೆ ಆದರೂ ಮನಸ್ಸಿನೊಳಗೇ ಕಣ್ಣೀರು ಹಾಕುವಳು. ಮಗು ತೊಂದರೆ ಅನುಭವಿಸುವ ಬದಲು ಆ ಪರಿಸ್ಥಿತಿ ತನಗೇ ಬರಬಾರದಿತ್ತೇನೋ ಎಂದು ಹಲುಬುವವಳು.

ಮಹಾರಾಷ್ಟ್ರದ ಒಂದು ಅಮ್ಮನ ಸಾಹಸ ಹೀಗಿದೆ: ಮಹಾರಾಷ್ಟ್ರದ ಶ್ವೇತಾ ಗೋರ್ ತನಗೊಬ್ಬಳು ಮಗಳು ಹುಟ್ಟುತ್ತಾಳೆಂದು ತಿಳಿದು ಹರ್ಷಗೊಂಡು, ತನ್ನನ್ನು ಪರಿಪೂರ್ಣವಾಗಿ ಮಗುವಿನ ಸೇವೆಗಾಗಿ ಮೀಸಲಿಡಬೇಕೆಂದು ಬಯಸಿ ತನ್ನ ಉದ್ಯೋಗವನ್ನೇ ತ್ಯಜಿಸಿದಳು. ತನ್ನೆಲ್ಲಾ ಪ್ರೀತಿಯನ್ನು ಮಗುವಿಗಾಗಿ ಧಾರೆ ಏರೆದಳು. ಆದರೆ ಮಗು ಹುಟ್ಟಿದ ಮುರೇ ದಿನಗಳಲ್ಲಿ ಮಗುವಿಗೆ ಅನಿರೀಕ್ಷಿತವಾದ ಖಾಯಿಲೆಯೊಂದು ಅಂಟಿಕೊಂಡಿತು. ಶ್ವೇತಾ ಕನಸ್ಸಿನಲ್ಲೂ ಊಹಿಸಿರಲಿಲ್ಲ... ಮುಂದೊಂದು ದಿನ ತನ್ನ ಮಗಳು ಪ್ರಾಚಿಗಾಗಿ ತಾನು ಬಹು ದೊಡ್ಡ ಸಾಹಸ ಮಾಡಬೇಕಾಗಿ ಬರಬಹುದೆಂದು!!

ಆದರೆ ಮಗು ಹುಟ್ಟಿದ ಮುರೇ ದಿನಗಳಲ್ಲಿ ಮಗುವಿಗೆ ಅನಿರೀಕ್ಷಿತವಾದ ಖಾಯಿಲೆಯೊಂದು ಅಂಟಿಕೊಂಡಿತು. ಮಗುವಿಗೆ ಅಲಾಜೈಲ್ ಸಿಂಡ್ರೊಮ್ ಮತ್ತು ಕ್ರೊನಿಕ್ ಲಿವರ್ ಎಂಬ ಹೆಸರಿನ ಖಾಯಿಲೆಗಳು ಜೊತೆ ಜೊತೆಯಾಗಿ ಬಂದವು. ಇದರ ಪರಿಣಾಮ ಮಗು ಹಗಲು ರಾತ್ರಿಯೆನ್ನದೇ ತುರಿಕೆಯಲ್ಲೇ ಜೀವನ ಕಳೆಯಬೇಕಾಯಿತು. ಅಷ್ಟೇ ಅಲ್ಲ ಪಿತ್ತ ಜನಕಾಂಗವು ಕ್ಷೀಣಿಸುತ್ತಾ ಹೋಗ ತೊಡಗಿತು.

ನೊಂದ ತಾಯಿ ಶ್ವೇತಾ ತನ್ನ ಪತಿಯಾದ ದಿಯೋದತ್ತಾ (ಈತ ಬೆಂಗಳೂರಿನ ಕಂಪೆನಿಯೊಂದರಲ್ಲಿ ಇಂಜಿನಿಯರ್)ನೊಡನೆ ಸೇರಿ ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಮಗಳು ಪ್ರಾಚಿಯನ್ನು ದಾಖಲಿಸಿದರು. ಅಲ್ಲಿನ ವೈದ್ಯರು ಬಹುಬೇಗನೆ ಕಾರ್ಯ ನಿರ್ವಹಿತರಾಗಿ ಎಲ್ಲವನ್ನೂ ಪರೀಕ್ಷಿಸಿ, ‘ಮಗು ಆರೋಗ್ಯವಂತಳಾಗಬೇಕಾದರೆ ಆರೋಗ್ಯವಂತ ತಂದೆ/ ತಾಯಿಯ ಪಿತ್ತ ಜನಕಾಂಗದ ಭಾಗವೊಂದನ್ನು ಕೊಡಬೇಕೆಂದು’ ತಿಳಿಸಿದರು. ವಿಷಯ ತಿಳಿದ ಶ್ವೇತಾಳು ಸ್ವಲ್ಪವೂ ವಿಚಲಿತಳಾಗದೇ ತನ್ನ ಪಿತ್ತ ಜನಕಾಂಗ (Liver) ವನ್ನೇ ಕೊಟ್ಟಳು. ಸರಿಯಾದ ರೀತಿಯಲ್ಲಿ ವೈದ್ಯರುಗಳು, ಮಣಿಪಾಲ್ ಆಸ್ಪತ್ರೆಯ ಇತರೆ ಸಿಬ್ಬಂದಿ ವರ್ಗದವರ ಸಹಕಾರದಿಂದ ಎಲ್ಲವೂ ಸರಾಗವಾಗಿ ನಡೆಯಿತು.

ಮಗಳಿಗಾಗಿ ಏನೂ ಬೇಕಾದರೂ ಮಾಡಲು ಸಿದ್ದಳಿದ್ದ ಅಮ್ಮ ಶ್ವೇತಾ ಇಂದು ಹುಷಾರಾಗಿದ್ದಾರೆ. ಅವರ ಪ್ರಯತ್ನಗಳು ನಿರಾಶದಾಯಕವಾಗಲಿಲ್ಲ. ಪ್ರಾಚಿಗೆ ಮೊದಲಿನ ತುರಿತವಿಲ್ಲ. ಹಸಿವಿನ ತೊಂದರೆಯಿಲ್ಲ. ರಾತ್ರಿ ಹೊತ್ತು ಆರಾಮವಾಗಿ ನಿದ್ರಿಸುತ್ತಾಳೆ. ಹೆತ್ತವರಿಬ್ಬರೂ ತಮ್ಮ ಮಗಳ ಆರೋಗ್ಯದಾಯಕ ನಾಳೆಗಳಿಗೆ ಸಾಕ್ಷಿಯಾಗಲಿದ್ದಾರೆ.




April 8, 2008

ಸೈಕಲ್ ಕಳ್ಳ (the bicycle thief)

ದಿ ಬೈಸಿಕಲ್ ಥೀಫ್ ಸಿನಿಮಾವು ನೈಜತೆಯಿಂದ ಕೂಡಿದ್ದು, ಅಂತ್ಯದವರೆಗೂ ಕುತೂಹಲವನ್ನು ಉಂಟುಮಾಡುತ್ತದೆ.

ಎರಡನೇ ಮಹಾಯುದ್ದದ ಪೂರ್ವಕಾಲದಲ್ಲಿ ಜನರು ಉದ್ಯೋಗಕ್ಕಾಗಿ ಅಲೆಯುವ ಪರಿ, ಉದ್ಯೋಗ ಲಭಿಸಿದ ಮೇಲೆ ಅದನ್ನು ಉಳಿಕೊಳ್ಳಲು ಒದ್ದಾಡುವ ಪರಿ... ಮುಂತಾದವನ್ನು ವಿಟ್ಟೊರಿ ಡೆ ಸಿಕಾ ಅವರು ಈ ಸಿನಿಮಾದಲ್ಲಿ ತುಂಬಾನೇ ಸೊಗಸಾಗಿ ನಿರೂಪಿಸಿದ್ದಾರೆ.
ಅಂಟೋನಿಯೋ (ನಾಯಕ) ಎರಡನೇ ಮಹಾಯುದ್ದದ ಪೂರ್ವ ಕಾಲದಲ್ಲಿ, ತನ್ನಂತಿರುವ ಹಲವು ನಿರುದ್ಯೋಗಿಗಳಂತೆ ಉದ್ಯೋಗ ಹರಸುತ್ತಿರುವಾಗ, ಒಂದೆಡೆ ಸೈಕಲ್ ಇದ್ದವನಿಗೆ ಉದ್ಯೋಗ ಇರುವ ವಿಷಯ ತಿಳಿದು ಅ ಕೆಲಸ ತನಗೆ ಲಭಿಸಬೇಕೆಂದು ಮನೆಗೆ ತೆರಲಿ ಹೆಂಡತಿಯ ಸಹಾಯದಿಂದ ಮನೆಯಲ್ಲಿದ್ದ ಬೆಡ್ ಶೀಟ್ ಮುಂತಾದವುಗಳನ್ನು ಮಾರಿ ಹೊಸದಾದ ಸೈಕಲ್ ಒಂದನ್ನು ಖರೀದಿಸುತ್ತಾನೆ. ಜೊತೆಗೆ ಉದ್ಯೋಗವನ್ನೂ ಪಡೆಯುತ್ತಾನೆ.



ಮೊದಲ ದಿನ ಸೈಕಲ್ಲನ್ನು ಪಕ್ಕದಲ್ಲಿಟ್ಟು, ತನ್ನ ಕೆಲಸ ಪ್ರಾರಂಭಿಸುವಾಗ ಒಬ್ಬ ಕಳ್ಳ ಬಂದು ಸೈಕಲ್ಲನ್ನು ಅಪಹರಿಸುತ್ತಾನೆ. ಇದರಿಂದ ವಿಚಲಿತನಾದ ಅಂಟೋನಿಯೋ ಕೆಲಸವನ್ನು ಅಲ್ಲೇ ನಿಲ್ಲಿಸಿ ಸೈಕಲ್ ಕದ್ದ ಕಳ್ಳನ ಹಿಂದೆ ಓಡುತ್ತಾನೆ.
ತನ್ನ ಮಗನ ಜೊತೆ ಸೇರಿ ಸೈಕಲ್ ಹುಡುಕುವ ಪರಿ ರೋಚಕವಾದದು. ಸೈಕಲ್ ಕಳ್ಳನ ಗುರುತು ಹಿಡಿದು ಆತನ ಮನೆಗೆ ಹೋಗಿ ಸೈಕಲ್ ಹುಡುಕಲು ಹೊರಟಾಗ ಅವರಿಗೆ ಕಂಡಿದ್ದು ಸೈಕಲ್ ಕಳ್ಳನ ಬಡತನ. ಸೈಕಲ್ ಅಲ್ಲೂ ಇರುವುದಿಲ್ಲ.

ಸೈಕಲ್ಲಿನ ಬಿಡಿಭಾಗಗಳನ್ನು ಮಾರಿರಬಹುದೆಂಬ ಗುಮಾನಿ ಮೇರೆಗೆ, ಸೈಕಲ್ ಬಿಡಿಭಾಗಗಳನ್ನು ಮಾರುವ ಶಾಪ್ ಗಳಿಗೆ ಹೋಗಿ ಹುಡುಕಾಡುತ್ತಾರೆ.ಅಲ್ಲೂ ಸಿಗದಾಗ ತೀರ ನಿರಾಶಿತನಾಗುತ್ತಾನೆ. ಒಂದು ಸಾರಿ ಅಂಟೋನಿಯೋ ಬೇರೆಯೊಬ್ಬನ ಸೈಕಲ್ ಕದಿಯುವ ಸಾಹಸಕ್ಕೆ ಕೈ ಹಾಕಿ, ಅದರಲ್ಲಿ ಸಿಕ್ಕಿಹಾಕಿ ಎಲ್ಲರಿಂದ ಒದೆ ತಿನ್ನುತ್ತಾನೆ.
ಮಳೆ, ಬಿಸಿಲು, ಹಸಿವು ಯಾವುದನ್ನೂ ಲೆಕ್ಕಿಸದೆ ತನ್ನ ಮಗನೊಡನೆ ಸೈಕಲ್ ಹುಡುಕುವ ಪ್ರಯತ್ನ ಸೋಜಿಗವಾದುದು. ಚರ್ಚ್ ಗೆ ಹೋದರೂ ಅವರ ಮನವೆಲ್ಲಾ ಸೈಕಲ್ ನತ್ತಲೇ ಇರುತ್ತದೆ. ಭವಿಷ್ಯ ಹೇಳುವವರ ಹತ್ತಿರನೂ ಹೋಗಿ ತನ್ನ ಸೈಕಲ್ ಸಿಗಬಹುದೇ ಎಂದು ನಾಯಕ ಕೇಳುವಾಗ ಅಯ್ಯೋ ಅನ್ನಿಸುತ್ತೆ.
ಚಿತ್ರದ ಕೊನೆಗೂ ಅಂಟೋನಿಯೋಗೆ ತನ್ನ ಸೈಕಲನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಸೈಕಲ್ ಸಿಕ್ಕರೆ ತನ್ನ ಬಡತನವನ್ನು ಗೆಲ್ಲಬಹುದು ಎಂಬ ನಾಯಕನ ಕನಸ್ಸು ಕನಸ್ಸಾಗಿಯೇ ಉಳಿಯುತ್ತದೆ. ಅಂಟೋನಿಯೋ ಮಗನಂತೂ ಸೈಕಲ್ಲನ್ನು ಒಂದೇ ಬಾರಿ ನೋಡಿದ್ದರೂ ಅದರ ಪ್ರತೀ ಭಾಗವನ್ನು ತನ್ನಲ್ಲಿ ನೆನಪಿಟ್ಟುಕೊಂಡಿರುತ್ತಾನೆ. ಇವೆಲ್ಲ ಸೈಕಲ್ ಹುಡುಕುವ ಅವರ ಪರಿಶ್ರಮದಲ್ಲಿ ವ್ಯಕ್ತವಾಗುತ್ತದೆ.
ಒಟ್ಟಾರೆಯಾಗಿ ಒಮ್ಮೆ ನೋಡಿದರೆ ಸದಾಕಾಲ ನೆನಪಿನಲ್ಲಿ ಉಳಿಯುವಂತಹ, ಹಂತ ಹಂತದಲ್ಲೂ ಕುತೂಹಲಮುಡಿಸುವ ಸಿನಿಮಾ ಇದಾಗಿದೆ.

March 18, 2008

ಬ್ಲಾಗರ್ಸ್ ಮಿಲನ

ಮಾರ್ಚ್ ೧೬, ೨೦೦೮ ರಂದು ಬೆಂಗಳೂರಿನಲ್ಲಿ ಮಿನಿ ದಾಖಲೆಯೊಂದನ್ನು ಪ್ರಣತಿ ಮಾಡಿತ್ತು. ಕರ್ನಾಟಕದ ಬ್ಲಾಗರ್ಸ್ ಗಳನ್ನು ಬೇಟಿಯಾಗುವ ಸದಾವಕಾಶವನ್ನು ಅದು ನಮಗೆಲ್ಲಾ ನೀಡಿತ್ತು. ಅಷ್ಟೇ ಅಲ್ಲ ಬ್ಲಾಗ್ ನಿಂದ ವೆಬ್ ಸೈಟ್ಗೆ ಹೋಗುವ ಬಗೆ, ಕನ್ನಡದಲ್ಲೇ ಎಸ್ ಎಂ ಎಸ್ ಮಾಡುವ ಸಾಹಸ ಮಾತ್ರವಲ್ಲದೇ ಲಿನಕ್ಸ್, ಜಾವಾ ಮುಂತಾದ ಕ್ಲಿಷ್ಟಕರವಾದ ಟೆಕ್ನಿಕಲ್ ವಿಷಯಗಳೂ ತಿಳಿಯುವಂತಾಯಿತು. ಪ್ರಣತಿ ತಂಡವೇ ಆಶ್ಚರ್ಯ ಪಡುವಂತೆ ಬ್ಲಾಗರ್ಸ್ ನೆರೆದಿದ್ದರು.

ಎಲ್ಲರಲ್ಲೂ ಹೊಸ ಉತ್ಸಾಹ, ಸಂತಸ, ಹುರುಪು ಇತರರನ್ನು ಪರಿಚಯಿಸುವ ತವಕ ಎದ್ದು ಕಾಣುತ್ತಿತ್ತು.

ಕೆಂಡಸಂಪಿಗೆಯ ಅಬ್ದುಲ್ ರಶೀದ್ ಅವರನ್ನು ಮೊದಲೇ ಭೇಟಿಯಾಗಿದ್ದೆ. ಆದರೆ ಸಂಪದದ ನಾಡಿಗ್, ದಟ್ಸ್ ಕನ್ನಡದ ಶ್ಯಾಮ್, ವಿಶ್ವ ಕನ್ನಡದ ಪವನಜ ಸಹಿತ ನಿಮ್ಮೆಲ್ಲರನ್ನೂ ಮುಖತಃ ಭೇಟಿ ಆಗುವ ಅವಕಾಶ ಇಷ್ಟು ಬೇಗ ಲಭಿಸಬಹುದೆಂದು ನಾನು ನಿರೀಕ್ಷಿಸಿರಲಿಲ್ಲ.

ಅದ್ರೂ ನಿರಾಶೆಯಾಯಿತು...

ಮೊದಲ ಭೇಟಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಅವಶ್ಯ ವೆನ್ನಿಸಿದ ಮಾಹಿತಿಗಳನ್ನು ನೀಡಿದ್ದೇನೋ ಸರಿ ಆದ್ರೆ...

ಎಲ್ಲರ ಪರಿಚಯ ಮಾಡಲು ಪ್ರಣತಿ ಒಂದು ಅವಕಾಶ ಕಲ್ಪಿಸಿದ್ದರೆ....?

ಕಾರ್ಯಕ್ರಮಕ್ಕೆ ಒಂದು ಕಳೆ ಬರುತ್ತಿತ್ತು. ಗುಂಪು ಚಟುವಟಿಕೆ ಮುಂತಾದವುಗಳ ಮುಖಾಂತರ ಒಬ್ಬರಿಗೊಬ್ಬರ ಪರಿಚಯ ಮಾಡಿಸುತ್ತಿದ್ದರೆ ಪ್ರಣತಿಗೆ ಡಬ್ಬಲ್ ಕ್ರೆಡಿಟ್ ಬರುತ್ತಿತ್ತೇನೋ...

ಪರವಾಗಿಲ್ಲ ... ಮುಂದಿನ ಬಾರಿ ಪ್ರಣತಿ ತಂಡ ಅಂಥಹ ಲೋಪಗಳಿಗೆ ಅವಕಾಶ ಕೊಡಲ್ಲ ಹಾಗೂ ಬಹು ಬೇಗನೇ ಮಗದೊಂದು ಬ್ಲಾಗರ್ಸ್ ಮಿಲನವನ್ನು ಹಮ್ಮಿಕೊಳ್ಳುತ್ತದೆ ಎಂಬ ಆಶಯ ನನ್ನದು. ಅ ದಿನ ನಾವೆಲ್ಲ ಮತ್ತೆ ಭೇಟಿಯಾಗೋಣ... ಅಲ್ಲಿಯವರೆಗೆ ಇದೇ ಅಂತರ್ಜಾಲದಲ್ಲಿ ಭೇಟಿಯಾಗುತ್ತಿರೋಣ...

February 27, 2008

ನನ್ನ ಸಾವಿಗೆ ನಾನೇ ಕಾರಣ!!!

ಆತ್ಮಹತ್ಯೆ ಮಾಡುವವರು ದೈರ್ಯಶಾಲಿಗಳಾ ಅಥವಾ ಹೇಡಿಗಳಾ? ಆತ್ಮಹತ್ಯೆ ಮಾಡಲು ಸಾಮಾನ್ಯರಿಗಂತೂ ಅಸಾಧ್ಯವಂತೆ ನಿಜನಾ?ಸಾವಿಗೆ ಹೆದರದವರು ಯಾರಿಗೆ ಹೆದರಿ ಸಾವಿಗೆ ಶರಣಾಗುತ್ತಾರೆ?
ಕಳೆದ ಹಲವಾರು ವರ್ಷಗಳಿಂದ ಮಾಧ್ಯಮಗಳಲ್ಲಿ ಪ್ರಕಟವಾದಂತಹ ಆತ್ಮಹತ್ಯೆ ಪ್ರಕರಣಗಳಲ್ಲಿ ‘ನನ್ನ ಸಾವಿಗೆ ನಾನೇ ಕಾರಣ’ ಎಂಬ ಪತ್ರ ಬರೆದು ಆಕೆ/ಆತ ಸಾವಿಗೆ ಶರಣಾಗಿದ್ದಾಳೆ/ನೆ ಎಂಬ ವಾಕ್ಯವನ್ನು ಓದುತ್ತಿರುತ್ತೇವೆ.

ಆತ್ಮಹತ್ಯೆ ಮಾಡುವ ಮನಸ್ಸು ಜನರಿಗೆ ಹೇಗೆ ಬರುತ್ತೆ? ಬಂದಂತಹ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಇಲ್ಲವೇ? ಅಥವಾ ಪ್ರಪಂಚದಲ್ಲಿ ತಾನೇ ಈ ಪರಿಯ ದುಃಖ ಬೇಸರವನ್ನು ಅನುಭವಿಸುತ್ತಿದ್ದೇನೆ. ಉಳಿದವರೆಲ್ಲರೂ ಅದ್ರಷ್ಟಶಾಲಿಗಳು. ತಾನು ಮಾತ್ರ ಈ ಪ್ರಪಂಚಕ್ಕೆ ಬಾರವಾಗಿಬಿಟ್ಟೆ ಎಂಬ ದುರ್ಬಲ ಯೋಚನೆಗಳೇ ಆತ್ಮಹತ್ಯೆ ಮಾಡಲು ಪ್ರಚೋದಿಸುತ್ತವೆಯೇ? ತಾವು ಎದುರಿಸಿದ ಕಷ್ಟಗಳನ್ನೇ ಈ ಜನ ಯಾಕೆ ಚಾಲೆಂಚ್ ಆಗಿ ಸ್ವೀಕರಿಸುವುದಿಲ್ಲ? ತನ್ನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಇವರು ಯಾಕೆ ಸಾಧಿಸಿ ತೋರಿಸಬಾರದು. ಒಂದಿಬ್ಬರು ಏನೋ ಹೇಳಿದ ಮಾತ್ರಕ್ಕೆ, ಮೋಸ ಮಾಡಿದ ಮಾತ್ರಕ್ಕೆ, ಸುಳ್ಳು ಅರೋಪ ಹೊರಿಸಿದ ಮಾತ್ರಕ್ಕೆ, ಅಪಪ್ರಚಾರ ಮಾಡಿದ್ದಕ್ಕೆ, ತನ್ನ ಘನತೆಗೆ ದಕ್ಕೆ ಬರುವಂತೆ ವರ್ತಿಸಿದ್ದಕ್ಕೆ, ತನ್ನಿಂದ ತಪ್ಪಿಲ್ಲದಿದ್ದರೂ ಅಪರಾಧಿ ತರಹ ನೋಡಿದ್ದಕ್ಕೆ, ಅದ್ಯಾರೊ ಸುಮ್ ಸುಮ್ನೆ ಬೈದದಕ್ಕೆ ಅತ್ಯಹತ್ಯೆ ಒಂದೇ ದಾರಿಯಾಗಿ ಬಿಟ್ಟಿತ್ತೇ?

ಸಾವಿನ ನಂತರ ಸ್ವರ್ಗ ಮತ್ತು ನರಕ ಗಳೆರಡು ಸ್ಥಳಗಳಲ್ಲಿ ಒಂದಕ್ಕೆ ಹೋಗಬೇಕಾದ ಅನಿವಾರ್ಯ ಇದೆ ಎಂದರಿತ ಜನ ಸಾಯುವ ಮುಂಚೆ ‘ ನನ್ನ ಸಾವಿಗೆ ನಾನೇ ಕಾರಣವೆಂದು ಬರೆದು ಉಳಿದವರಿಗೆ ಆಗಬಹುದಾದ ಶಿಕ್ಷೆ ತಪ್ಪಿಸಿ, ಅವರಿಂದ ಸತ್ತವರು ಗ್ರೇಟ್ ಎನ್ನಿಸಿದಾಕ್ಷಣ ಆತ್ಮಹತ್ಯೆ ಮಾಡಿದವರಿಗೆ ಸ್ವರ್ಗ ಶಿಕ್ಷೆ ಲಭಿಸುತ್ತೇನು?

ಹಾಗೇ ಪತ್ರ ಬರೆದಾಕ್ಷಣ ಎಲ್ಲಾ ಪರಿಹಾರವಾಗುತ್ತಾ? ಆಕೆ / ಆತನ ಸಾವಿಗೆ ಮನೆಯವರೊ/ ಸ್ನೇಹಿತರೊ ಅಥವ ಇನ್ನಾರೊ ಕಾರಣ.. ಇಲ್ಲದಿದ್ದರೆ ಆಕೆ/ಆತ ಆತ್ಮಹತ್ಯೆ ಮಾಡುತ್ತಿರಲಿಲ್ಲ ಎಂಬ ಹುಳ ಎಲ್ಲರ ಮನದಲ್ಲೂ ಮನೆಮಾತಾಗಿರುವುದಿಲ್ಲವಾ?

ಅನ್ಯಾಯ ಕಂಡಾಕ್ಷಣ ಸಾವಿಗೆ ಶರಣಾಗುವ ಬದಲು ಅನ್ಯಾಯವನ್ನು ದಿಟ್ಟವಾಗಿ ಪ್ರತಿಭಟಿಸಿ ಸಾಯಲು ಸಿದ್ದರಿರಬೇಕೆಂದು ಯಾಕೆ ಯಾರು ಯೋಚಿಸುತ್ತಿಲ್ಲ. ಆತ್ಮಹತ್ಯೆ ಮಾಡಲೇ ಬೇಕೆಂಬ ಇಚ್ಛೆ ಇದ್ದರೆ ಪ್ಲೀಸ್ ಮೊದಲು ಏನನ್ನಾದರೂ ಸಾಧಿಸಿ... ನಿಮ್ಮಿಂದ ಒಂದಿಬ್ಬರಿಗಾದರೂ ಒಳಿತಾಗಲಿ. ನಿಮ್ಮ ಸಾವಿನಿಂದ ಇತರರಿಗೆ ತ್ರಪ್ತಿ, ನೆಮ್ಮದಿ, ಸಂತೋಷ ಸಿಗುತ್ತದೆ ಎಂಬ ತಪ್ಪು ಕಲ್ಪನೆ ಖಂಡಿತ ಬೇಡ. ವಿದ್ಯಾವಂತರಾಗಿಯು ಚಿಲ್ಲರೆ ವಿಷಯಗಳಿಗೆ ನೊಂದು ಆತ್ಮಹತ್ಯೆ ಮಾಡಲು ಮುಂದೆ ಹೋಗುವ ನೀವುಗಳು ಹೇಡಿಗಳೇ ಸರಿ...

ನಿಮ್ಮ ಜನನಕ್ಕೆ ನೀವು ಕಾರಣವಲ್ಲ! ಆಗಿದ್ದ ಮೇಲೆ ಆತ್ಮಹತ್ಯೆ ಮಾಡಿಕೊಳ್ಳುವ ಯಾವ ಹಕ್ಕು ನಿಮಗಿಲ್ಲ.. ಪ್ರಪಂಚದಲ್ಲಿ ಅದೆಷ್ಟು ಮಂದಿ ತಮ್ಮ ಕುಟುಂಬದವರನ್ನೆಲ್ಲಾ ಕಳೆದು ಕೊಂಡು, ಭಯಾನಕ ಖಾಯಿಲೆ ಬಂದಿದ್ದರೂ ನೊಂದು ಕೊಳ್ಳದೇ ಬದುಕಿ ಸಾಧಿಸಿದ್ದಾರೆ. ನಮ್ಮ ನಾಳೆಗಳು ನಮಗಾಗಿ ಕಾದಿರುತ್ತವೆ. ಅವುಗಳನ್ನು ಹಸನ್ಮುಖದಿಂದ ಸ್ವೀಕರಿಸೋಣ.

ಮತ್ತೂ ಸಾಯಲೇ ಬೇಕೆಂದು ನಿರ್ಧರಿಸಿದ್ದರೆ ಒಂದ್ನಿಮಿಷ... ನಿಮ್ಮ ಸುತ್ತಮುತ್ತಲು ನಡೆಯುವ ಹಗರಣ, ಮೋಸ, ವಂಚನೆಗಳನ್ನು ಬಯಲಿಗೆಳೆದು she/he is great ಅಂತ ಅನ್ನಿಸಿಕೊಳ್ಳಿ.. ಬಹುಶಃ ಆ ಹೊತ್ತಿಗೆ ನಿಮ್ಮ ಆತ್ಮಹತ್ಯೆಯ ಯೋಚನೆ ಮಾರುದೂರ ಹೋಗಿರುತ್ತೆ.

February 4, 2008

ಮನುವಿನ ನೂಪುರ ಭ್ರಮರಿ

ಹಾಯ್,


ನನಗೊಬ್ಬಳು ಗೆಳತಿಯಿದ್ದಾಳೆ. ಶುದ್ಧ ತರಲೆ ಅಂಥನೇ ಹೇಳಬಹುದು. ನನಗಿಂತಲೂ ಒಂದು ಪಟ್ಟು ಜಾಸ್ತಿನೇ ಅವಳ ತುಂಟಾಟಗಳು ನಡೆಯುತ್ತವೆ ಎಂದರೂ ತಪ್ಪಾಗದು. ಅವಳ ಮೇಲೆ ಪ್ರೀತಿ ಹೆಚ್ಚಾದಗೆಲ್ಲಾ ನನ್ನ ಮೊಬೈಲ್ ನಲ್ಲಿ ಅವಳ ಹೆಸರು ಮನು ಎಂದಿರುತ್ತಿದ್ದರೆ, ಕೋಪ ಬಂದಾಗ ಮನೋರಮಾ ಬಿ ಎನ್ ಎಂದು ಪೂರ್ಣ ಹೆಸರನ್ನು ಕಾಣಬಹುದು.

ಈ ಮನುಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ದೈರ್ಯವಿಲ್ಲ ಎಂಬುದಾಗಿ ಒಂದೊಮ್ಮೆ ನಾನು ಕನ್ನಡ ಪ್ರಭದ ‘ಕಾಲೇಜು ರಂಗ’ದ ಮುಖಾಂತರ ತಿಳಿಸಿದ್ದೆ. ಆ ದಿನಗಳಲೆಲ್ಲಾ ಆಕೆ ನನ್ನಲ್ಲಿ ಮಾತು ಬಿಟ್ಟಿದ್ದಳು. ಆದ್ರೂ ನಮ್ಮಿಬ್ಬರಲ್ಲಿ ಅದೆನೋ ಹೊಂದಾಣಿಕೆ, ಆತ್ಮೀಯತೆ ಇತ್ತು.


ಕ್ಷಮಿಸಿ. ಇಂದು ಅವಳ ಬಗ್ಗೆ ಬ್ಲಾಗಿನಲ್ಲಿ ಬರೆಯಲು ಮುಖ್ಯ ಕಾರಣ.... ಅವಳು ಭರತನಾಟ್ಯಂ ಹಾಗೂ ಇತರೆ ನ್ರತ್ಯಗಳ ಕುರಿತಾಗಿನ ತನ್ನದೇ ಆದ ದ್ವೈಮಾಸಿಕ (ಎರಡು ತಿಂಗಳಿಗೊಮ್ಮೆ) ವೊಂದನ್ನು ಕಳೆದ ಒಂದು ವರ್ಷದ ಹಿಂದೆ ಆರಂಭಿಸಿದ್ದಳು. ‘ನೂಪುರ ಭ್ರಮರಿ’ ಕಳೆದ ಒಂದು ವರ್ಷದಲ್ಲೇ ಬಹು ಖ್ಯಾತಿಯನ್ನೇ ಪಡೆಯಿತು ಎಂಬುದರಲ್ಲಿ ಎರಡು ಮಾತಿಲ್ಲ.
ಇದೇ ಫೆಬ್ರವರಿ ೧೦ರಂದು ಮಡಿಕೇರಿಯಲ್ಲಿ ‘ನೂಪುರ ಭ್ರಮರಿ’ಯ ವರ್ಷಾಚರಣೆಯು ಸಾಯಂಕಾಲ ೪ ಗಂಟೆಗೆ ಭಾರತೀಯ ವಿದ್ಯಾ ಭವನ ಮಡಿಕೇರಿಯ ದೇವಸ್ಥಾನ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದಲ್ಲಿ ನಡೆಯಲಿದೆ. ಅಂದು ‘ನೂಪುರ ಭ್ರಮರಿ’ಯ ವೆಬ್ ಸೈಟನ್ನು ಉದ್ಟಾಟಿಸುವ ಗುಟ್ಟೊಂದನ್ನು ಮನು ನನ್ನಲ್ಲಿ ತಿಳಿಸಿದ್ದಾಳೆ...
ಮನು ನಿನಗೆ ನನ್ನ ಆತ್ಮೀಯ ವಂದನೆಗಳು. ನಿನ್ನ ಕಾರ್ಯದಲ್ಲಿ ಯಶಸ್ಸು ಲಭಿಸಲಿ ಎನ್ನುವ ಹಾರೈಕೆ ನಿನ್ನ ಜಗಳಗಂಟಿ ಗೆಳತಿಯದು.

January 24, 2008

ಸದಾಕಾಲ ನೆನಪಿನಲ್ಲಿರುವವರು...

ಯಾಕೋ ಗೊತ್ತಿಲ್ಲ... ಕೆಲವರು ನನಗೆ ಪ್ರತಿನಿತ್ಯ ನೆನಪಾಗುತ್ತಾರೆ. ಅವರಲ್ಲಿ ಪ್ರತೀ ನಿತ್ಯ ಮಾತನಾಡಬೇಕು, ಅವರ ಮಾತುಗಳನ್ನು ಕೇಳಬೇಕು. ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಾನೂ ಆದರ್ಶವಾದಿಯಾಗಬೇಕು ಎಂದು ಅನ್ನಿಸುತ್ತೆ. ನನಗೆ ಎಲ್ಲೆಂದರಲ್ಲಿ ಸ್ನೇಹಿತರು, ಮಾರ್ಗದರ್ಶಕರು... ಸಿಗುತ್ತಾರೆ. ಅದರೆ ಬಹುಕಾಲ (ಈಗಲೂ) ಹಚ್ಚಹಸಿರಾಗಿ ನನ್ನ ಮನಪಟಲದಲ್ಲಿ ಇರುವವರು - ನನ್ನ ಶಿಕ್ಷಕಿ ರತಿ ಮೇಡಂ, ಲೇಖಕಿ ನೇಮಿಚಂದ್ರ, ನನ್ನ ಸೀನಿಯರ್ ಶ್ರಿದೇವಿ, ನಟಿ ತಾರಾ, ನಿರೂಪಕಿ ಅಪರ್ಣಾ, ಡಾಕ್ಟರ್ ಬೀನಾ, ಪೂರ್ಣಿ, ಪಕದ್ಮನೆಯ ಯಶೋಧಕ್ಕ.

ಇವರನ್ನೆಲ್ಲಾ ನನ್ನ ಜೊತೆಯಲ್ಲೇ ಇರಿಸಬೇಕೆಂದು ಬಯಸುತ್ತೇವೆ. ಅವರ ಜೊತೆ ಕಳೆದಂತಹ ಅಮುಲ್ಯ ಕ್ಷಣಗಳನ್ನು ಮೆಲುಕು ಹಾಕುತ್ತಿರುತ್ತೇನೆ. ಅವರಿಗೆಲ್ಲಾ ಅದೆಷ್ಟು ಬಾರಿ ಎಸ್ ಎಮ್ ಎಸ್ ಕಳುಹಿಸಿ ಉಪದ್ರ ಮಾಡಿದೆನೋ!!.

ಅದ್ರೂ ಅವರ ಜೊತೆ ಮಾತನಾಡಿದಾಗೆಲ್ಲಾ ಒಂದು ರೀತಿಯ ಖುಷಿಯಾಗುತ್ತೆ. ಮೆಸೇಜ್ಗೆ ಮರುತ್ತರ ಬಂದ್ರೆ ವ್ಹಾರೆವ್ಹಾ ಗ್ರೇಟ್ ಎಂಬ ಉದ್ಗಾರ ಬರುತ್ತೆ.

January 18, 2008

ಯಾದ್ ವಶೇಮ್ ೨

ನೇಮಿಚಂದ್ರರವರ ಕಾದಾಂಬರಿಯಲ್ಲಿ ಇಂತಹ ಹಲವು ಮನತಟ್ಟುವ ವಾಕ್ಯಗಳಿವೆ. ದಿನನಿತ್ಯ ಬಳಸಬಹುದಾದ ಡೈಲಾಗುಗಳಿವೆ. ನನಗಿಷ್ಟವಾಗಿದೆ. ಬಹುಶಃ ನಿಮಗೂ ಇಷ್ಟವಾಗಬಹುದು. ಓದಿ ನೋಡಿ.

  • ಬದುಕಬೇಕು ಹಂಚಿಕೊಂಡು, ಬದುಕಬಹುದೆ ಕಿತ್ತುಕೊಂಡು?
  • ಹೇಗೆ ವಿವರಿಸಲಿ ಭಾರತವನ್ನು? ಒಂದು ಧರ್ಮ, ಒಂದು ದೇವರ ಈ ನೆಲದಲ್ಲಿ ನಿಂತು ನೂರು ಧರ್ಮ, ಸಾವಿರ ಸಾವಿರ ದೇವರುಗಳ ನಾಡಿನ ಬಗ್ಗೆ ಹೇಗೆಂದು ವಿವರಿಸಲಿ. ಮುಕ್ಕೋಟಿ ದೇವರುಗಳು... ಅವರನ್ನು ಸಹಸ್ರ ಸಹಸ್ರ ನಾಮದಲ್ಲಿ ಕರೆಯುತ್ತಾರೆ. ಕೂಗುತ್ತಾರೆ, ಶಪಿಸುತ್ತಾರೆ, ಬೇಡುತ್ತಾರೆ, ಬೈಯುತ್ತಾರೆ, ಮುನಿಯುತ್ತಾರೆ, ರಾಜಿಯಾಗುತ್ತಾರೆ... ಸಾವಿರ ಹೆಸರಿಟ್ಟು ಕೂಗಿ ಕೊನೆಗೆ ದೇವನೊಬ್ಬನೇ ಎನ್ನುತ್ತಾರೆ.
  • ನನ್ನನ್ನು ಕಾಡಿದ್ದು ಇತಿಹಾಸದ ಸಾವುಗಳಲ್ಲ, ವರ್ತಮಾನದ ಸಾವುಗಳು. ಭವಿಷ್ಯದ ಸಾವುಗಳು. ನಾನು ನಿನ್ನೆಗಳ ನೂರು ನೋವನ್ನು ಮರೆಯಲು ಸಿದ್ದ. ನಾಳೆಗಳ ಭರವಸೆಯನ್ನು ಯಾರಾದರೂ ನನಗೆ ನೀಡಿದರೆ...
  • ಮನುಷ್ಯ ಮನುಷ್ಯನ ನಡುವೆ ದ್ವೇಷವಿಲ್ಲದ, ಗೋಡೆ ಇಲ್ಲದ ಗುಮಾನಿ ಇಲ್ಲದ ಪೂರ್ಣ ವಿಶ್ವಾಸದ ಒಂದು ಸುಂದರ ಸಂಬಂಧದ ಸೇತುಬಂಧದ ಕನಸು ನನ್ನದು.
  • ಸಾವಿರ ವರ್ಷಗಳಿಂದ ಜೊತೆಗೆ ಬದುಕಿದ್ದ ಮುಸ್ಲಿಂಮರು, ಯಹೂದಿಗಳೇಕೆ ಒಂದಾಗಲು ಸಾಧ್ಯವಿಲ್ಲ? ಸಾಧ್ಯವಿಲ್ಲವೆ ಮನಸ್ಸು ಮಾಡಿದರೆ ಒಡೆದ ಮನಸ್ಸುಗಳನ್ನು ಕೂಡಿಸಲು? ಸಾಧ್ಯವಿಲ್ಲವೆ ಶಾಂತಿಗೊಂದು ಅವಕಾಶ ನೀಡಲು? ನಡುವೆ ಎಳೆದ ಗಡಿಗಳನ್ನು, ಗೆರೆಗಳನ್ನು ಅಳಿಸಿ ಕದನ ವಿರಾಮಕ್ಕೆ ಕರೆ ನೀಡಲು ಸಾಧ್ಯವೇ ?
  • ಇತಿಹಾಸದ ತಪ್ಪುಗಳನ್ನು ತಿದ್ದಲು ಹೊರಟರೆ, ಹೊಸ ತಪ್ಪುಗಳನ್ನು ಮಾಡುತ್ತೇವೆ. ಇತಿಹಾಸವನ್ನು ಭೂಪಕ್ಕೆ ಬಿಟ್ಟುಬಿಡುವುದು ಮೇಲು. ಭವಿಷ್ಯದ ಭರವಸೆಯಷ್ಟೇ ನಮಗಿರಲಿ. ಮತ್ತೆಂದೂ ಯಾವ ದೇವಲಯವೂ ಒಡೆಯದಿರಲಿ. ಯಾವ ಮಸೀದಿಯು ಉರುಳದಿರಲಿ. ಜನರ ಮನಸ್ಸಿನಲಿ ಕಟ್ಟಿದ ನಂಬಿಕೆಯ ಗೋಪುರಗಳು ಕುಸಿಯದಿರಲಿ. ಯಾವ ಮಾನವನೂ ಮತ್ತೆ ಶಿಲುಬೆಗೇರದಿರಲಿ.
  • ಏಕೋ ಮನಸ್ಸಿಗೆ ಹಿತವಿಲ್ಲ. ಏನು ವಾದಿಸುತ್ತಿದ್ದೇನೆ? ಏಕೆ ವಾದಿಸುತ್ತಿದ್ದೇನೆ? ಇಂದಿನ ಸಮಸ್ಯೆಗೆ ಸಾವಿರ ಸಾವಿರ ವರ್ಷಗಳ ಕತೆಯೇಕೆ ಬೇಕು?
  • ದಿಟದಲ್ಲಿ ದ್ವೇಷಕ್ಕೆ ಕಾರಣಗಳಿರಲಿಲ್ಲ. ನೆಪಗಳು ಮಾತ್ರವಿದ್ದವು.
  • ಉತ್ತರಗಳ ಹುಡುಕಬೇಕಿದೆ ಪ್ರಶ್ನೆಯಾದ ಗೋಡೆಯಾಚೆಗೆ
  • ಭೂತದ ಭೂತಗಳನ್ನು ಉಚ್ಚಾಟಿಸಿ ಭವಿಷ್ಯದತ್ತ ಮುಖ ಮಾಡಿ ಹೊರಟ ಝಳಕು ಆ ಎಳೆಯ ಕಣ್ಣುಗಳಲ್ಲಿತ್ತು!
  • ನಾನು ಬದುಕುವೆ, ಬದುಕಬೇಕು. ಇದಕ್ಕಿಂತ ಹೆಚ್ಚಿನದು ಏನು ಆಗಬಲ್ಲದು. ನರಕದ ಪಾತಾಳಕ್ಕೆ ತಲುಪಿ ನಿಂತ ಮೇಲೆ ಇನ್ಯಾರ ಭಯ, ಇನ್ಯಾತರ ಭಯ.

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...