December 17, 2007

ಕ್ರಿಸ್ಮಸ್ ಯಾರಿಗಿಷ್ಟವಿಲ್ಲ?




ಕಳೆದ ವರ್ಷ ಆಚರಿಸಿದಂತಹ ಕ್ರಿಸ್ಮಸ್ ಸಂಭ್ರಮ ಇನ್ನೂ ಹಚ್ಚ ನೆನಪಾಗಿಯೇ ಇದೆ. ಅದಾಗಲೇ ಮಗದೊಂದು ಕ್ರಿಸ್ಮಸ್ ಹತ್ತಿರ ಬರುತ್ತಿದೆ. ಎಲ್ಲರ ಮನೆಗಳಲ್ಲಿ ಕ್ರಿಸ್ಮಸ್ ಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಒಂದೆಡೆ ಕ್ರಿಸ್ಮಸ್ ಕುಸ್ವಾರ್ ತಯಾರಿಯಾದರೆ ಉಳಿದೆಡೆ ಗೋದಲಿ, ಕ್ರಿಸ್ಮಸ್ ಟ್ರೀ ಗಾಗಿನ ಸಿದ್ಧತೆ ನಡೆಯುತ್ತಿದೆ. ಮೊನ್ನೆ ತಾನೆ ನಿನ್ನೆ ಜೀ ಕನ್ನಡದವರು ಮೈಸೂರಿನ ಆಶ್ರಮವೊಂದಕ್ಕೆ ಕ್ರಿಸ್ಮಸ್ ಆಚರಣೆಗಾಗಿ ಹೋಗಿದ್ದರು. ಅಲ್ಲಿನ ಮಕ್ಕಳೊಂದಿಗೆ ಸಾಂತಾ ಕ್ಲಾಸ್ ಕುಣಿದದ್ದೇ ಕುಣಿದದ್ದು. ನನಗೂ ಮೈಸೂರನ್ನು ನೋಡುವ ಅದ್ರಷ್ಟ ಇತ್ತು ಎಂದೆನಿಸುತ್ತೆ. ಜೀ ತಂಡದೊಡನೆ ನಾನೂ ಅಲ್ಲಿಗೆ ಹೋಗಿದ್ದೆ.




ನನ್ನ ಕ್ರಿಸ್ಮಸ್ ಸಂಭ್ರಮದ ಆ ದಿನಗಳನ್ನು ನೆನಪಿಸುತ್ತಿದ್ದಂತೆ ಇತ್ತೀಜೆಗೆ ಬಿಡುಗಡೆ ಆಗಿದ್ದ ‘ಆ ದಿನಗಳು’ ಸಿನಿಮಾ ನಟ ಶರತ್ ಲೋಹಿತಾಶ್ವ ತನ್ನ ಕುಟುಂಬದೊಡನೆ ಅಲ್ಲಿಗೆ ಆಗಮಿಸಿ ಮರೆಯಲಾಗದಂತಹ ಮನೋರಂಜನೆಯನ್ನು ನೀಡಿದರು. ಶರತ್ ಅಲ್ಲಿನ ಅನಾಥ ಮಕ್ಕಳಿಗೆ ಹಾಡುಗಳನ್ನು ಕಲಿಸಿ ತಾನೂ ಒಬ್ಬ ಗಾಯಕ ಎಂಬುದನ್ನು ಸಾಬೀತು ಪಡಿಸಿದರು. ಮಕ್ಕಳ ಒಡನಾಟ ಕಂಡು ಅಲ್ಲಿದ್ದ ವಿದೇಶಿಯರೂ ಪುಲಕಿತರಾಗಿದ್ದರು.
ಮೈಸೂರಿನ ಸೇಂಟ್ ಪಿಲೋಮಿನಾ ಚರ್ಚ್ ನಲ್ಲಿ ಕ್ರಿಸ್ಮಸ್ ತಯಾರಿ ಎಂದಿನಂತೆ ಸಾಗಿತ್ತು.
ಈ ಮಧ್ಯೆ ಶೋರೂಮ್ ಗಳಲ್ಲಿ ಮಾರುಕಟ್ಟೆಗಳಲ್ಲಿ ಕ್ರಿಸ್ಮಸ್ ಟ್ರೀ, ಕ್ರಿಸ್ಮಸ್ ನಕ್ಷತ್ರ, ಕ್ರಿಸ್ಮಸ್ ಕೇಕ್, ಗ್ರೀಟಿಂಗ್ಸ್ ಗಳನ್ನು ನೋಡುವಾಗ ಎಲ್ಲವನ್ನೂ ಖರೀದಿಸುವುದಿಲ್ಲದಿದ್ದರೂ ಪರ್ವಾಗಿಲ್ಲ... ಕಣ್ತುಂಬ ನೋಡಿ ಆನಂದಿಸೋಣವೆಂದು ಕೊಳ್ಳುತ್ತೇನೆ.


November 14, 2007

ಸವಿನೆನಪಾಗಿ ಉಳಿದ ವೀಣಾಧರಿ


ಸಂದರ್ಶನವನ್ನು ಹೇಗೆ ಮಾಡುವುದೆಂಬುದರ ಕುರಿತಾಗಿ ಹೆಚ್ಚೆನೂ ಗೊತ್ತಿಲ್ಲದ ದಿನಗಳಲ್ಲಿ ನಾನು ವೀಣಾಧರಿ ಅವರ ಸಂದರ್ಶನ ಮಾಡಿದ್ದೆ. ಅದು ನನ್ನ ಪ್ರಪ್ರಥಮ ಸಂದರ್ಶನವೂ ಆಗಿತ್ತು. ವೀಣಾಧರಿ ಅದಾಗಲೇ ಚಿರ ಪರಿಚಿತರು. ರವಿ ಬೆಳಗೆರೆಯಿಂದ ವೀಣಕ್ಕ ಎಂದೇ ಕರೆಯಲ್ಪಟ್ಟವರು. ವೀಣಾಧರಿ ಅವರನ್ನು ಪ್ರಥಮ ಬಾರಿ ನೋಡಿದಾಗ ನನಗೆ ಆಶ್ಚರ್ಯವಾಗಿತ್ತು. HIV ಪಾಸಿಟಿವ್ ಮಹಿಳೆ ಇಷ್ಟೊಂದು ಸಂತಸದಿಂದಿರಲು ಹೇಗೆ ಸಾಧ್ಯ? ಅವರ ಅ ಕ್ರಿಯಾಶೀಲತೆ ಮುಖದಲ್ಲಿ ಕಾಣುತ್ತಿರುವ ಉಮ್ಮಸ್ಸು ಕಂಡು ವ್ಹಾರೆವ್ಹಾ she is really great ಎಂದು ಮನದಲ್ಲೇ ಅಭಿನಂದಿಸಿದೆ.

ತಾನು ಇತರೆ ಕೆಲಸದಲ್ಲಿ ನಿರತರಾಗಿರುವಾಗಲೇ ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಕ್ಯಾಮೆರಾ ಕೈಕೊಟ್ಟಿದ್ದರಿಂದ ಅವರೊಂದಿಗೆ ನಿಂತು ಫೋಟೋ ತೆಗಿಸಬೇಕೆಂದುಕೊಂಡ ಆಶೆ ಅಂದು ನೆರವೇರಲಿಲ್ಲ. ವೀಣಾಧರಿಗೆ ನನ್ನ ಕೊನೇಯ ಪ್ರಶ್ನೆ ಹೀಗಿತ್ತು: ನೀವು ಹೀಗೆ ಏಡ್ಸ್ ರೋಗಿಗಳಿಗೆ ಆಶಾಕಿರಣವಾಗಲು ಹೋಗಿ, ಜನರಲ್ಲಿ ಏಡ್ಸ್ ಕುರಿತ ಭಯ ದೂರವಾಗಿ ಅನೈತಿಕ ಚಟುವಟಿಕೆಗಳು ಹೆಚ್ಚಾಗುವುದಿಲ್ಲವೇ?

ನನ್ನ ಪ್ರಶ್ನೆಯಿಂದ ಅವರು ತುಂಬಾನೇ ಬೇಸರಗೊಂಡಿದ್ದರು. ನಾನು ಆ ಪ್ರಶ್ನೆಯನ್ನು ವೀಣಾಧರಿ ಎಂಬ ಉತ್ತಮ ಸಮಾಜ ಸೇವಕಿಗೆ ಕೇಳಬಾರದಿತ್ತೇನೊ ಎಂದು ಮತ್ತೆ ನನಗೆ ಅನ್ನಿಸಿತ್ತು. ಆ ಸಂದರ್ಶನ ನಂತರ ಮತ್ತೆ ಒಂದೆರಡು ಬಾರಿ ನಾನು ಅವರನ್ನು ಬೇಟಿಯಾಗಿದ್ದೆ.

ಅದೊಂದು ಸಮಾರಂಭದಲ್ಲಿ ವೀಣಾಧರಿ ಹೇಳಿದ್ದರು ಏಡ್ಸ್ ಎಂದಾಕ್ಷಣ ಸಾವಲ್ಲ ಯಾವ ಖಾಯಿಲೆಗೂ ಇಲ್ಲದ ವಿಶೇಷ ದಿನ ಏಡ್ಸ್ ರೋಗಕ್ಕೆ ಯಾಕೆ? ಏಡ್ಸ್ ರೋಗಿಗಳನ್ನು ಅಷ್ಟೊಂದು ಕೇವಲವಾಗಿ ನೋಡುವ ಅವಶ್ಯಕತೆಗಳಿಲ್ಲ. ಇತ್ತೀಜೆಗೆ ಏಡ್ಸ್ ರೋಗಿಗಳಿಂದ ವೈದ್ಯರುಗಳು ಬ್ಲ್ಯಾಕ್ ಮೇಲ್ ಮಾಡಿ ಲಕ್ಷಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಏಡ್ಸ್ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಅಂಕಿ ಅಂಶಗಳೆಲ್ಲ ಸುಳ್ಳು. ಒಬ್ಬ ಏಡ್ಸ್ ರೋಗಿಯನ್ನು ಅವನು ಹೋದ ಕಡೆಯಲೆಲ್ಲ ಪರೀಕ್ಷಿಸಿ ನೊಂದಣಿ ಮಾಡಿಸುತ್ತಾರೆ. ಇದರಿಂದ ಅಂಕಿ ಅಂಶಗಳಲ್ಲಿ ಏರು ಪೇರಾಗುತ್ತಿದೆ.

ವೈದ್ಯರುಗಳಿಂದ ಹಾಗೂ ಇತರೆ ಸಂಸ್ಥೆಗಳಿಂದ ವಂಚಿತರಾದ HIV ಪೀಡಿತರು ತಮ್ಮ ಸಮಸ್ಯೆಗಳನ್ನು ಬರೆದಂತಹ ಹಲವಾರು ದಾಖಲೆಯ ಪತ್ರಗಳು ತಮ್ಮಲ್ಲಿ ಇವೆ. ಅವುಗಳನ್ನು ಸಂಗ್ರಹಿಸಿಟ್ಟಿದ್ದೇವೆ. ಮುಂದೊಂದು ದಿನ ಇವೆಲ್ಲವುಗಳಿಗೂ ಪರಿಹಾರ ಒದಗಿಸುತ್ತೇನೆ ಎಂದಿದ್ದ ವೀಣಾಧರಿ ಇಂದು ನಮ್ಮಿಂದ ಬಹುದೂರ ಹೋಗಿದ್ದಾರೆ. ಅವರ ಸಾವಿನ ಸುತ್ತ ಹಲವು ಅನುಮಾನಗಳಿವೆ ಎಂಬ ಅಂಶದೆಡೆಗೆ ಇತ್ತಿಚೆಗೆ ಮಾಧ್ಯಮಗಳು ಪ್ರಕಟಿಸಿದ್ದವು. ಅವುಗಳನ್ನು ನಿರ್ಲಕ್ಷಿಸುವಂತಿಲ್ಲ.

October 16, 2007

ಯಾದ್ ವಶೇಮ್ - ೧

  • ಹಗಲು ಬಾಡುವ ಹೊತ್ತು ಇರುಳು ಮೆಲ್ಲನೆ ಕಣ್ತೆರೆದಿತ್ತು. ಸೂರ್ಯ ಮುಳುಗಿತ್ತಿದ್ದ ಸಮುದ್ರದಾಳಕ್ಕೆ ಇಳಿಯುತ್ತಿದ್ದ. ಇಳಿವ ಸೂರ್ಯನ ಕೆಂಪು ಬೆಳಕಿನಲ್ಲಿ ನಮ್ಮ ಬದುಕಿನ ಸಂಜೆಯಲ್ಲಿ ನೆನಪುಗಳ ಬುತ್ತಿ ಬಿಚ್ಚಿಕೊಂಡಿತು.

  • ಈ ಹುಡುಗಿ ನನ್ನ ಬದುಕಿಗೆ ಬಂದು ಅದೆಷ್ಟು ವರ್ಷಗಳಾದವು. ದಶಕಗಳೇ ಕಳೆದು ಹೋದವು. ಆದರೂ ಕೆಲವೊಮ್ಮೆ ಅನಿತಾ ಅಪ್ಪಟ ಅಪರಿಚಿತಳಂತೆ ಕಂಡುಬಿಡುತ್ತಾಳೆ - ವಿವೇಕ್

  • ಯುದ್ದ ಮುಗಿದಿತ್ತು ಯುರೋಪಿನಲ್ಲಿ. ನನ್ನೆದೆಯ ಕದನಕ್ಕೆ ಕೊನೆ ಎಲ್ಲಿತ್ತು? ಎಲ್ಲಿ ಅಮ್ಮ ಅಕ್ಕ ತಮ್ಮ? ಎಲ್ಲವರು? ಬದುಕುಳಿದರೆ, ಬಲಿಯಾದರೆ, ಹೇಳಲು ಯಾರಿದ್ದರು? ಇಲ್ಲಿ ಒಡೆಯಬಹುದೆ ನನ್ನ ಇತಿಹಾಸದ ಒಡವುಗಳೆಲ್ಲ. ಮರಳಿ ಎದುರಾಗಬಹುದೆ, ಹೊರಳಿ ಬರಬಹುದೆ ನನ್ನವರು ಚರಿತ್ರೆಯ ಆಳದಿಂದೆದ್ದು?

  • ಎಷ್ಟೊಂದು ಬದುಕು ಹಿಂದಿದೆ. ಒಂದಿಷ್ಟೇ ಬದುಕು ಮುಂದೆ. ಕಳೆದ ಬದುಕಿನ ತುಂಬಾ ಹುಡುಕಾಟವಿದೆ- ಹೊರಗೆ ಹುಡುಕಿದ್ದು, ನನ್ನೊಳಗೆ ಹುಡುಕಿದ್ದು, ಎದೆಯಕದಗಳನ್ನೆಲ್ಲ ತಟ್ಟಿ ತಡಕಿದ್ದು, ಯಾರು ನಾವು? ಎಲ್ಲಿಂದ ಬಂದೆವು?

  • ಕಳೆದುಕೊಳ್ಳಬಹುದಾದ ಎಲ್ಲವನ್ನೂ ಕಳೆದುಕೊಂಡ ಮೇಲೆ ಇನ್ನು ಕಳೆದುಕೊಳ್ಳುವ ಭಯವೆ ಇಲ್ಲದ ನಿರ್ಲಿಪ್ತತೆ ಆ ಬಿರಿದ ಕಣ್ಣುಗಳಲ್ಲಿ.

  • ಗೋರಿಗಳ ಎದುರಲ್ಲಿ ಸತ್ತವರ ನಡುವೆ ಅಗಲಿದ ಆತ್ಮಗಳ ಇರುವಲ್ಲಿ ಎರಡು ಎಳೆಯ ಜೀವಗಳ ನಡುವೆ ಒಂದು ನೋವಿನ ಸಂಬಂಧ, ಮೌನದಲ್ಲಿ, ನಿಶ್ಶಬ್ದದಲ್ಲಿ ಏಕಾಂತದಲ್ಲಿ ಆರಂಭವಾಗಿತ್ತು... ಆ ಸಂಬಂಧಕ್ಕೆ ಯೌವನದ ಬುದ್ಬುರಗಳಿರಲಿಲ್ಲ, ಕಿಶೋರದ ಆವೇಗವಿರಲಿಲ್ಲ. ಧುಮುಕುವ ಜಲಪಾತದ ಭೋರ್ಗರೆತವಿರಲಿಲ್ಲ. ಸಮುದ್ರದ ಮೊರೆತವಿರಲಿಲ್ಲ.

  • ಬಹುಶ: ನನಗೆಂದೂ ಸ್ಮಶಾನ, ಗೋರಿಪಾಳ್ಯ ಇವೆಲ್ಲವೂ ಭಯದ ವಿಷಯವಾಗಲೇ ಇಲ್ಲ.

  • ನನ್ನದೊಂದೇ ಪ್ರಶ್ನೆ - ಯುದ್ದ ಯಾವಾಗ ಮುಗಿಯುತ್ತೆ.

  • ಹೊರಗಿನಿಂದ ಬಂದ ಬ್ರಿಟಿಷರನ್ನು ತೊಲಗಿ ಭಾರತದಿಂದ ಎಂದು ಮಾಡಬಹುದು. ನಮ್ಮೊಳಗಿನಿಂದಲೇ ನಮ್ಮ ನಡುವೆಯೇ ಹುಟ್ಟುವ ಹಿಟ್ಲರುಗಳನ್ನು ತೊಲಗಿಸುವುದು ಹೇಗೆ?

  • ಹಣ ಏನು ಯಾರ್ ಬೇಕಾದ್ರು ಸಂಪಾದಿಸ್ತಾರೆ. ಗುಣ ತರಾಕಾಗುತ್ತಾ.. ಅಪ್ಪಟ ಅನಕ್ಷರಸ್ಥ ಅಮ್ಮ ಹೇಳಿದ್ದಳು!

  • ಮತ್ತೆಲ್ಲವನ್ನೂ ಎಲ್ಲರನ್ನೂ ಕಿತ್ತುಕೊಂಡಿದೆ ಬದುಕು ನನ್ನಿಂದ. ಶಾಶ್ವತ ವಿಷಾದದ ಏಕತಾನತೆಯಷ್ಟೇ ಇನ್ನು ಉಳಿದಿರುವುದು.

  • ಯಾರು ಉಳಿದಿರಬಹುದು ನನ್ನ ಇಡೀ ವಂಶದಲ್ಲಿ? ಯಾರು ಉಳಿದಿರಬಹುದು ನನ್ನ ರಕ್ತ ಹಂಚಿಕೊಂಡವರಲ್ಲಿ. ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಅತ್ತೆಯಂತೆಯೇ ನಾನೂ ನನ್ನ ವಂಶದ ಕತೆಗಳನ್ನು ಹೇಳಬಲ್ಲೆನೆ? ನನ್ನೊಳಗಿನ ಈ ಕತೆಗಳು ನನ್ನೊಡನೆಯೇ ಮಣ್ಣಾಗುತ್ತವೆಯೇ?

  • ಬರಲಿರುವ ನಾಳೆಗಳಲ್ಲಿ ನಿನ್ನೆಗಳ ಹುಡುಕಿ ಹೋಗುವ ತುಡಿತವಿತ್ತು. ಬಂದ ಹಾದಿಯನ್ನೊಮ್ಮೆ ಹಿಂದೆ ತಿರುಗಿ ನೋಡುವ ತವಕವಿತ್ತು. ಅವೆಲ್ಲವೂ ಸದ್ಯಕ್ಕೆ ಹ್ಯಾನಾಳ ಎದೆಯ ಗೂಡಿನಲ್ಲಿ ಭದ್ರ ಕದ ಬಿಗಿದು ಅಗುಳೆ ಹಾಕಿತ್ತು.

  • ಮರೆಯಬಹುದೆ ತನ್ನವರನ್ನು ಅವರ ಸಾವು ಬದುಕಿನ ಪತ್ತೆ ಇಲ್ಲದ ಭೂತವನ್ನು, ಹಿಂದೆ ಬಿಟ್ಟು ಬಂದ ಬದುಕನ್ನು?

  • ‘ಹಾಂ. ನಡೆದಿತ್ತು ಒಂದೇ ಒಂದು’ ಹಿಟ್ಲರನ ವಿರುದ್ದ ನಡೆದ ಒಂದೇ ಒಂದು ಸಾರ್ವಜನಿಕ ಪ್ರತಿಭಟನೆ - ಮಹಿಳೆಯರದಾಗಿತ್ತು!

  • ನನಗೆ ನಂಬಿಕೆ ಇದೆ ಜನಗಳ ಶಕ್ತಿಯಲ್ಲಿ ಅನ್ಯಾಯದ ವಿರುದ್ದ ದನಿ ಎನ್ನುವ ಜನರ ಸಂಘಟನೆಯಲ್ಲಿ ನಾನೇನೂ ಆಗದಿದ್ದರೂ, ಆ ಗುಂಪಿನಲ್ಲೊಂದು ಸಣ್ಣ ದನಿಯಾಗಲು ಬಯಸುತ್ತೇನೆ.

  • ಹಿಟ್ಲರ್ ನಿಜಕ್ಕೂ ಅಂದು ಸತ್ತನೆ? ಇಲ್ಲ ಇಲ್ಲಿ ಎಲ್ಲೋ ಯಾರದೋ ಮಿದುಳಲ್ಲಿ, ಎದೆಯಲ್ಲಿ ಇನ್ನೂ ಉಸಿರಾಡುತ್ತಿರುವನೆ, ಸಮಯ ಕಾದು ಜಿಗಿದು ಹೊರಬರಲು? ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಹುದು. ಅಮೇರಿಕಾದಲ್ಲೂ ಇಸ್ರೇಲಿನಲ್ಲೂ ಅಹಿಂಸೆಯನ್ನೇ ಬೋಧಿಸಿದ ನಮ್ಮ ಭಾರತದಲ್ಲೂ. ನಮ್ಮೆದ್ಯ ಅಸಹನೆಯಲ್ಲಿ ಹಿಟ್ಲರ್ ಇದ್ದಾನೆ. ನಮ್ಮ ಅಹಂಕಾರದಲ್ಲಿ ಹಿಟ್ಲರ್ ಇದ್ದಾನೆ. ನಮ್ಮ ದುರಭಿಮಾನದಲ್ಲಿ. ಯಾವುದೇ ಕ್ಷಣವನ್ನು ಗಲಭೆಯಾಗಿಸಿ, ರಕ್ತಪಾತವಾಗಿಸಿ ವಿಜ್ರಂಭಿಸಲು ಕಾದ ಹಿಟ್ಲರನಿದ್ದಾನೆ. ಬಹುಶ: ನಮ್ಮೊಳಗೇ ಅವನ ಸಂಹಾರವಾಗಬೇಕಿದೆ ನಮ್ಮೊಳಗೇ....

( ನೇಮಿಚಂದ್ರರವರ ಇತ್ತೀಚೆಗೆ ಬಿಡುಗಡೆಯಾದ ಯಾದ್ ವಶೇಮ್ ಕಾದಂಬರಿಯ ಕೆಲವು ಆಯ್ದ ವಾಕ್ಯಗಳು)

ನನ್ನ ನೆಚ್ಚಿನ ಬರಹಗಾರ್ತಿ ಸಿಕ್ಕಾಗ...

ಕಳೆದ ತಿಂಗಳು ನನಗೆ ನೇಮಿಚಂದ್ರರವರ ಯಾದ್ ವಶೇಮ್ ಪುಸ್ತಕ ಬಿಡುಗಡೆ ಸಮಾರಂಭದ ಆಮಂತ್ರಣ ಬಂದಿತ್ತು. ನನ್ನ ನೆಚ್ಚಿನ ಬರಹಗಾರ್ತಿಯಿಂದ ಆಮಂತ್ರಣ ಬಂದಿದ್ದರಿಂದ ಉಬ್ಬಿಹೋಗಿದ್ದೆ.
ಗಾಂಧಿ ಜಯಂತಿ ದಿನದಂದು ನನ್ನ ಇನ್ನಿಬ್ಬರು ಗೆಳತಿಯರ ಜೊತೆಗೂಡಿ ಕನ್ನಡ ಭವನಕ್ಕೆ ಹೋದೆ.
ನನಗ್ಯಾಕೋ ಅನುಮಾನ ನನ್ನನ್ನು ನಿಜಕ್ಕೂ ನೇಮಿಚಂದ್ರನೇ ಅಮಂತ್ರಿಸಿದ್ದಾ? ಅವರ ಕಾದಂಬರಿ ಬಿಡುಗಡೆ ಇವತ್ತೇನಾ? ಒಂದು ವೇಳೆ ಸಮಾರಂಭ ಇಲ್ಲದಿದ್ದರೆ ನೇಮಿಚಂದ್ರರನ್ನು ಕಣ್ತುಂಬ ನೋಡುವ ಭಾಗ್ಯನೂ ತಪ್ಪುತ್ತೆ. ಮನದಲ್ಲಿ ಹಲವು ಗೊಂದಲ ಕಂಡುಬಂದರೂ ಕನ್ನಡ ಭವನದೊಳಗೆ ಅಡಿ ಇಟ್ಟಾಗ ಮನದಲ್ಲಿ ಸಂತಸ. ಅದು ನಿಜಕ್ಕೂ ನೇಮಿಯವರ ಪುಸ್ತಕ ಬಿಡುಗಡೆ ಸಮಾರಂಭ. ಒಂದಷ್ಟು ರೋಮಂಚನ, ಖುಷಿ, ಪುಳಕ. ವೇದಿಕೆಯಲ್ಲಿ ನೇಮಿ ಜತೆಗೆ ಇತರೆ ಬರಹಗಾರರೂ ಇದ್ರು. ಅವರೆಲ್ಲರ ನಡುವೆ ಚೂಡಿದಾರ ಹಾಕಿ ಮಿಂಚುತ್ತಿದ್ದರು ನೇಮಿಚಂದ್ರ.
ನನಗಂತೂ ತುಂಬಾ ಸಂತಸವಾಗಿತ್ತು. ಕಣ್ ಕಣ್ ಬಿಟ್ಟು ಅವರನ್ನೇ ನೋಡುತ್ತಿದ್ದೆ. ಅದೆಂಥಹ ವಿನಯ. ಅಲ್ಲಿಗೆ ಆಗಮಿಸಿದ ಎಲ್ಲರಲ್ಲೂ ವಿನಯ ದೈನ್ಯತೆಯಿಂದ ವರ್ತಿಸುತ್ತಿದ್ದರು. ಹಿರಿಯ ಬರಹಗಾರರಿಂದ ಕೈ ಮುಗಿದು ಆಶೀರ್ವಾದ ಕೇಳುತ್ತಿದ್ದರು. ನಾನು ಅವರ ಪ್ರತಿ ಚಲನ ವಲನಗಳನ್ನು ನೋಡಿ ಭಾವುಕಳಾಗಿದ್ದೆ. ಸಭೆಯಲ್ಲಿ ಅವರು ಕಾದಂಬರಿ ಕುರಿತಾಗಿ ಮಾತನಾಡಿದ್ದರು. ಇವರ ಬರಹ ಮಾತ್ರವಲ್ಲ. ಮಾತುಗಳೂ ಕೇಳಲು ತುಂಬಾ ಹಿತಕರವಾಗಿದ್ದವು. ಅವರು ಅವರಮ್ಮನ ಬಗ್ಗೆ ಅಭಿಮಾನದಿಂದ ಹೇಳುವಾಗ ನನಗರಿವಿಲ್ಲದಂತೆ ಕಣ್ಣಲ್ಲಿ ನೀರು ಇಳಿದಿದ್ದು.
ನನ್ನ ಮಮ್ಮಿನೂ ಅವರಮ್ಮನಂತೆ ಗ್ರೇಟ್. ನಾನು ಬಯಸಿದ ಬಯಸದ ಎಲ್ಲವನ್ನೂ ನಮಗೆ ನೀಡಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮ ಮುಕ್ತಾಯವಾದೊಡನೆ ಗೆಳತಿಯರನ್ನು ಬಿಟ್ಟು ನಾನೊಬ್ಬಳೇ ನೇಮಿಚಂದ್ರರಲ್ಲಿಗೆ ಹೋಗಿ ನನ್ನ ಹೆಸರು ವೀಣಾ ಡಿ’ಸೋಜಾ ಎಂದೆ. ಅವರು ಅಷ್ಟೇ ಹರ್ಷದಲ್ಲಿ ‘ಓ ವೀಣಾ... ಇ-ಮೇಲ್ ಫ್ರೆಂಡ್’ ಅಂದರು. ಅ ಕ್ಷಣ ನನ್ನನ್ನೇ ನಾ ಮರೆತೆ. ಹಾಗಿದ್ರೆ ನಾನು ಮೇಲ್ ಮಾಡಿದ್ದು ನನಗೆ ಮೇಲ್ ಬರುತ್ತಿದ್ದದು ನೇಮಿಚಂದ್ರರಿಂದಲೇ. ವ್ಹಾ! ಐ ಆಮ್ ರಿಯಲಿ ಲಕ್ಕಿ. ಮೇಡಂ ನನ್ನ ಗೆಳತಿಯರು ಹೊರಗೆ ಇದ್ದಾರೆ. ನಿಮ್ಮನ್ನು ಭೇಟಿ ಮಾಡಿಸಬೇಕು ಎಂದೆ. ಖಂಡಿತಾ ಬರುತ್ತೇನೆ ಎಂದೇಳಿ ನಮ್ಮ ಜೊತೆ ಒಂದಷ್ಟು ಹೊತ್ತು ಮಾತನಾಡಿದ್ದರು.
‘ಇಷ್ಟು ಚಿಕ್ಕ ವಯಸ್ಸಿನಲ್ಲಿ ಉದ್ಯೋಗದಲ್ಲಿದ್ದಿರಾ’ ಎಂದು ಆಶ್ಚರ್ಯದಿಂದ ಕೇಳಿದರು. ನಾವು ಸ್ನಾತಕೋತ್ತರ ಪದವಿ ಮುಗಿಸಿ ಬಂದವರೆಂದು ಹೇಳಿದ್ರೆ ಅವರಿಗೆ ನಂಬೋಕೇ ಕಷ್ಟವಾಗಿತ್ತು. ವಾಹನವೊಂದು ಅವರಿಗಾಗಿ ಕಾದಿತ್ತು. ಅದ್ರೂ ಅಟೋಗ್ರಾಫ್ ಕೊಡಲು ಹಿಂಜರಿಯಲಿಲ್ಲ.

September 10, 2007

ಟಾರ್ಚ್ ಹಾಕಿ ಹುಡುಕಿದರೆ ಸಿಗುವರು ನರಸಿಂಹ ಭಂಡಾರಿಯಂಥವರು

ನಾನು ಚಿಕ್ಕವಳಿದ್ದಾಗ ಅಂದುಕೊಳ್ಳುತ್ತಿದ್ದೆ. ನಾವೆಲ್ಲಾ ವಿಜ್ಜಾನಿಗಳಾಗ ಬೇಕಿದ್ದರೆ ವಿಜ್ಜಾನ ವಿಭಾಗದಲ್ಲಿ ಪದವಿಪಡೆಯಬೇಕೆಂದು. ಅದರೆ ಕೊಪ್ಪದ ನರಸಿಂಹ ಭಂಡಾರಿಯವರೊಡನೆ ಮಾತನಾಡಿದ ಮೇಲೆ ತಿಳಿಯಿತು. ಮನಸ್ಸು ಮತ್ತು ಶ್ರಮ ನಮ್ಮ ಜೊತೆಗಿದ್ದರೆ ನಾವೂ ಸಂಶೋಧನೆಗಳನ್ನ ಮಾಡಬಹುದೆಂದು.






ಹೌದು. ನಿಮಗೆ ಈಗಾಗಲೇ ಕೊಪ್ಪದ ನರಸಿಂಹ ಭಂಡಾರಿ ಯಾರೆಂದು ತಿಳಿದಿರಬಹುದು. ರಾಷ್ಟ್ರೀಯ ಪ್ರಶಸ್ತಿಯಿಂದ ಹಿಡಿದು ಮೊನ್ನೆಯ ಎಸ್ಸೆಲ್ ಕರ್ನಾಟಕ ಶ್ರೇಷ್ಠ ಉದ್ಯಮಿ ತನಕ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿದ್ದವರೇ ನರಸಿಂಹ ಭಂಡಾರಿ. ಮಾಧ್ಯಮಗಳಲ್ಲಂತೂ ಬಹುವಾಗಿಯೇ ಮಿಂಚಿದ್ದಾರೆ. ಮಾಧ್ಯಮದವರೂ ಅಪರೂಪಕ್ಕೊಮ್ಮೆ ಇಂಥಹ ಸಾಧಕರನ್ನು ಗುರುತಿಸುತ್ತಾರೆ ಬಿಡಿ!

ತನ್ನ ಧರ್ಮ ಪತ್ನಿ ವಸಂತಿ ಮತ್ತು ಮಕ್ಕಳಾದ ಆದರ್ಶ್, ಆಜಯ್ ಮತ್ತು ಆಶ್ವಿತ್ ಜೊತೆಗೂಡಿ ನೆಮ್ಮದಿಯ ಬದುಕು ಇವರಿಂದು ನಡೆಸಬೇಕಾದರೆ ಪ್ರಮುಖ ಕಾರಣ ಸಾವಿರಾರು ರೈತರ ಕಷ್ಟ, ದುಖ: ವನ್ನು ತಮ್ಮ ಸಂಶೋಧನೆಗಳಿಂದ ದೂರಮಾಡಿದುದರ ಫಲವಾಗಿದೆ.
ಎಲ್ಲರಂತೆ ಆರ್ಥಿಕ ತೊಂದರೆಯಿಂದಾಗಿ ವಿಧ್ಯಾಭ್ಯಾಸ ಅರ್ಧದಲ್ಲೇ (ಎಸ್ ಎಸ್ ಎಲ್ ಸಿ) ನಿಲ್ಲಿಸಬೇಕಾಗಿ ಬಂದರೂ ಮುಂದಿನ ದಿನಗಳಲ್ಲಿ ತಮ್ಮ ಅಮೋಘ ಬುದ್ದಿಶಕ್ತಿಯನ್ನು ಬಳಸಿ ರೈತರಿಗೆ/ಜನಸಾಮಾನ್ಯರಿಗೆ ಉಪಯೋಗವಾಗುವಂಥಹ ಸಂಶೋಧನೆಗಳನ್ನು ಮಾಡುತ್ತಲೇ ಬಂದರು. ಹಸಿ ಅಡಿಕೆ ಸುಳಿಯುವ ಯಂತ್ರ, ಒಣ ಅಡಿಕೆ ಸುಳಿಯುವ ಯಂತ್ರ, ಹೈಡ್ರೊ ಪಂಪ್, ಏಕ/ದ್ವಿ ಚಕ್ರ ವಾಹನಗಳು, ಕಬ್ಬಿಣದ ಏಣಿ, ಡ್ರೈಯರ್...
ಹೀಗೆ ಸಂಶೋಧನೆಗಳನ್ನೂ ಮಾಡುತ್ತಾ ಇತರರ ಕಷ್ಟಗಳಿಗೆ ತನ್ನದೇ ಆದ ರೀತಿಯಲ್ಲಿ ಸ್ಪಂದಿಸುತ್ತಾ ಬಂದಿದ್ದಾರೆ.
ಇವರು ಯಾವುದೇ ಗಿನ್ನಿಸ್ ದಾಖಲೆಗಾಗಿ ಅಥವಾ ದುಡ್ಡಿಗಾಗಿ ಸಂಶೋಧನೆಗಳನ್ನು ಮಾಡಿಲ್ಲ. ತಮ್ಮಂಥಿರುವ ಇತರರ ಕಷ್ಟಗಳನ್ನು ಅರಿತು, ಅವರ ನೋವುಗಳಿಗೆ ಸ್ಪಂದಿಸುವ ಚಿಕ್ಕದಾದ ಸಾಹಸವನ್ನಷ್ಟೇ ಮಾಡಿದ್ದಾರೆ. ಇಂಥಹ ಭಂಡಾರಿಯವರು ಸಾವಿರಾರು ಮಂದಿ ನಮ್ಮೊಡನೆ ಇರುವರು. ಆದರೆ ಅವರೆಲ್ಲಾ ಅಗೋಚರವಾಗಿದ್ದಾರೆ. ಇದಕ್ಕೆಲ್ಲಾ ಮಾಧ್ಯಮಗಳು ಕಾರಣವಾಗಿವೆ.ಮಾಧ್ಯಮದವರು ಅಂಥವರನ್ನು ಗುರುತಿಸಿಲು ವಹಿಸುವ ನಿರ್ಲಕ್ಷವನ್ನು ಇತರೆ ಪ್ರಖ್ಯಾತರನ್ನು ಗುರುತಿಸುವಾಗ ಮಾಡುವುದಿಲ್ಲ... ನರಸಿಂಹ ಭಂಡಾರಿಯವರಂಥವರನ್ನು ಪ್ರೋತ್ಸಾಹಿಸುವತ್ತ ಗಮನ ಹರಿಸಿದರ ನಮಗೆ ನಷ್ಟವಂತೂ ಖಂಡಿತ ಇಲ್ಲ ಅಲ್ವಾ?

August 8, 2007

ಅಂಥದ್ದೇನೂ ಇಲ್ಲ...

ಮಾರನೆಯ ದಿನ ಕೆಲಸಕ್ಕೆ ಹಾಜರಾಗಬೇಕಿತ್ತು. ಒಂದು ವೇಳೆ ಹಾಜರಾಗದ್ದಲ್ಲಿ ಕೆಲಸವನ್ನು ಕಳೆದು ಕೊಳ್ಳುವ ಅವಕಾಶಗಳಿದ್ದವು.ಇದೇ ಕಾರಣಕ್ಕಾಗಿ ಏನಾದರಾಗಲಿ ಎಂದು ಪ್ರಾರ್ಥಿಸುತ್ತಾ ಇವತ್ತೇ ರಾತ್ರಿ ನನ್ನೂರಿನಿಂದ ಹೊರಟ್ಟಿದ್ದೆ. ಬಸ್ಸ್ ಟಿಕೇಟಿಗಾಗಿ ಅದೆಷ್ಟು ಒದ್ದಾಡಿದ್ದೆ. ಕೊನೆಗೂ ಪುಣ್ಯಾತ್ಮನೊಬ್ಬ ಟಿಕೇಟ್ ಕ್ಯಾನ್ಸಲ್ ಮಾಡಿದ್ದರಿಂದ ನನಗೆ ಅವಕಾಶ ಸಿಕ್ಕಿತು. ಆದರೆ ನನ್ನ ದುರಾದ್ರಷ್ಟ ಒಬ್ಬಾತ ಬಂದು ನನ್ನ ಪಕ್ಕದಲ್ಲೇ ಒಕ್ಕರಿಸಬೇಕೆ. ಆತನನ್ನು ಎದ್ದೇಳಿ ಎನ್ನಲು ನನಗೆ ಅಧಿಕಾರವೇ ಇರಲಿಲ್ಲ. ಹಾಗೇ ಒಂದು ವೇಳೆ ಹೇಳಿದ್ದರೂ ನನಗೆ ಸಿಕ್ಕ ಸೀಟನ್ನು ಕಳೆದುಕೊಳ್ಳಬೇಕಾಗುತ್ತಿತ್ತೇನೊ?

ಆಯ್ಯೋ ಇಡೀ ರಾತ್ರಿ ಈ ಯುವಕನೊಡನೆ ಪಯಣಿಸಬೇಕಾಯಿತಲ್ಲ ಎಂಬ ಭಯ ನನ್ನನಾವರಿಸಿತ್ತು. ಹಗಲೊತ್ತಾದರೆ ಕಥೆಯನ್ನೊ,ಕಾದಂಬರಿಯನ್ನೊ ಅಥವಾ ಪತ್ರಿಕೆಯನ್ನೊ ಓದಬಹುದಾಗಿತ್ತು. ಹೊರಗೆ ಮಳೆ ಬೇರೆ ಬರುತ್ತಿದೆ. ಕಿಟಕಿ ತೆರೆದು ರಾತ್ರಿಹೊತ್ತು ಮಿಂಚುವ ಬೆಳಕನ್ನೂ ನೊಡದಾದೆ. ಬರೊಬ್ಬರಿ ೮ ಗಂಟೆ ಉಸಿರು ಗಟ್ಟಿಯಾಗಿಡುದು ಕಂಬಳಿಯನ್ನು ಸುತ್ತಿ ಪಯಣಿಸಲು ಅಣಿಯಾದೆ. ತಟ್ಟನೆ ಹೊಳೆಯಿತು. ಮೊಬೈಲ್ !! ನನಗೀಗ ಬೇಸರ ಕಳೆಯಲು ಇದ್ದ ಏಕೈಕ ಅಸ್ತ್ರವೆಂದರೆ ಮೊಬೈಲ್ . ಮನೆಯಿಂದ ಹೊರಬರುವ ಮುಂಚೆನೇ ಮೊಬೈಲ್ ಪೂರ್ತಿ ಚಾರ್ಚ್ ಮಾಡಿದ್ದೆ. ಬಸ್ಸು ಅದಾಗಲೇ ಹೊರಟಿತ್ತು.

ಮೊಬೈಲ್ ನಲ್ಲಿ ೧೦ ಗಂಟೆ ಆದದ್ದು ನೋಡಿ ‘ಈಗ ರೇಡಿಯೋ ಇಡುವ ಹಾಗಿಲ್ಲ. ಹಾಕಿದ್ರೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕೇಳಬೇಕಾಗಿತ್ತು. ಕೇಳುವುದೇನು ಸಮಸ್ಯೆಯಲ್ಲ. ಆದರೆ ಕೇಳ್ತಾನೇ ನಿದ್ದೆ ಬಂದ್ರೆ?... ಅದಿಕ್ಕೆ ಇದ್ದ ಎಲ್ಲಾ ಸ್ನೇಹಿತೆಯರಿಗೂ ಮೆಸ್ಸೆಜ್ ಮಾಡಲು ಪ್ರಾರಂಭಿಸಿದೆ. ಯಾರಾದ್ರೂ ಚಾಟಿಂಗ್ ಗೆ ಸಿಗುತ್ತಾರೋ ಕಾದೆ. ಕೊನೆಗೂ ಇಬ್ಬರು ಸಿಕ್ಕರು. ಒಬ್ಳು ಪಿಯುಸಿ ಪ್ರೆಂಡ್ ಮತ್ತೊಬ್ಬಾಕೆ ಹಾಸ್ಟೆಲ್ ಮೆಟ್ . ಪ್ರೀ ಮೆಸ್ಸೆಜ್ ಇನ್ನೂ ನಲ್ವತ್ತು ಇದ್ದವು. ದುರಾದ್ರಷ್ಟವೆಂಬಂತೆ ರೆಂಜ್ ಕೈಕೊಟ್ಟಿತ್ತು.

ಆ ಪುಣ್ಯಾತ್ಮ ಏನು ಮಾಡುತ್ತಿದ್ದನೋ ತಿಳಿಯದು. ನನಗೊ ಕಣ್ಣು ತುಂಬಾ ನಿದ್ದೆ ಬರುತ್ತಿತ್ತು. ಏನೂ ಮಾಡಬೇಕೆಂದೇ ತೋಚದು.ಅದ್ರೂ ಮೌನವಾಗಿ ಕುಳಿತೆ. ನನ್ನ ಕಾಲೇಜು ದಿನಗಳು, ಅವಕ್ಕೂ ಮುಂಚಿನ ದಿನಗಳೆಲ್ಲವನ್ನೂ ನೆನೆದೆ. ಆ ಸವಿ ನೆನಪುಗಳನ್ನು ನೆನೆದರೆ ನಿದ್ರಾದೇವಿಯೂ ದೂರಾವಾಗುತ್ತಾಳೆ. ಅಂಥಹ ಮಧುರ ಕ್ಹಣಗಳವು.ನಿಜ ಅದೆಷ್ಟು ಹೊತ್ತು ಮೌನವಾಗಿ ಕನಸು ಕಾಣುತ್ತಾ ಕುಳಿತ್ತಿದ್ದೆನೋ ... ಮಧ್ಯದಲ್ಲೊಮ್ಮೆ ಬ್ರೇಕ್ ೧೫ ನಿಮಿಷ ವಿರಾಮ ಕೊಟ್ಟಿದ್ದೇ ಗೊತ್ತಾಗಲಿಲ್ಲ. ಬಸ್ಸು ಅದರಷ್ಟಕ್ಕೆ ಪಯಣಿಸುತ್ತಲಿತ್ತು. ಹಾಡು ಹಾಕುವಂತಿರಲಿಲ್ಲ. ಎಲ್ಲರೂ ಮಲಗಿದ್ದರು. ಬಹುಶ: ಆತನೂ ಮಲಗಿರಬೇಕು... ಅಂತೂ ಕತ್ತಲೆ ಸ್ವಲ್ಪ ಸ್ವಲ್ಪನೇ ಮಾಯವಾಗುತ್ತಿತ್ತು. ಅಬ್ಬ ಪುಣ್ಯಾತ್ಮ ಅವನಷ್ಟಕ್ಕೆ ಇದ್ದ ಎಂದು ಇನ್ನೇನೂ ನಿಟ್ಟಿಸಿರು ಬಿಡಬೇಕೆನ್ನುವಷ್ಟರಲ್ಲಿ ಆತ ಮೇಡಂ i love u ಅನ್ನಬೇಕೆ? ನನಗೆ ಉಕ್ಕಿದ್ದ ಕೋಪ ಅಷ್ಟಿಷ್ಟಲ್ಲ. ಆತನಿಗೆ ಬಯ್ಯೋಣವೆಂದು ಕಣ್ಣೆಲ್ಲಾ ಕೆಂಪಗೆ ಮಾಡಿ ನೋಡಿದ್ರೆ ಆತ ಮಲಗಿದ್ದ. ‘ಲೂಸ್ ಏನೇನೊ ಕನವರಿಸುತ್ತಿದೆ. ಬಹುಶ: ಯಾರನ್ನೋ ಇಷ್ಟಪಟ್ಟಿರಬೇಕು’ ಅಂದುಕೊಂಡು ನನಗೆ ನಾನೇ ಸಮಾಧಾನಿಸುತ್ತಾ ಸುಮ್ಮಗಾದೆ.


ಕಡೆಗೂ ಬಸ್ಸಿಳಿದು ನಾನು ನೆಮ್ಮದಿಯಿಂದ ನನ್ನ ಮುಂದಿನ ಬಸ್ಸಿನೆಡೆಗೆ ಹೋಗುತ್ತಿರುವಾಗ ಆ ಲೂಸ್ ಮತ್ತೆ ನನ್ನ ಹಿಂದೇ ಬರುತ್ತಿದ್ದ. ನನಗೆ ಮುಜುಗರವಾಗುತ್ತಿದ್ದರೂ ಬಹುಶ: ಆತನಿಗೂ ಅದೇ ಬಸ್ಸಿನಲ್ಲಿ ಹೋಗಬೇಕೆನೋ ಎಂದುಕೊಂಡೆ. ಇನ್ನೇನೂ ಬಸ್ಸು ಹತ್ತಬೇಕೆನ್ನುವಷ್ಟರಲ್ಲಿ ‘ಮೇಡಂ ನಿಮ್ಮಲ್ಲಿ ಸ್ವಲ್ಪ ಮಾತನಾಡಬೇಕಿತ್ತು’ ಎಂದು ಆತ ಮನವಿ ಮಾಡುತ್ತಿದ್ದ.ಅವನ ಆ ‘ಮೇಡಂ’ ಕೇಳಿಯೇ ಸಣ್ಣಗೆ ಕಂಪಿಸಿದೆ.

ಆದ್ರೂ ಕಣ್ಣು ಕೆಂಪು ಮಾಡಿ ಏನು ಎಂದೆ. ಆತ ಹೆದರಿದಂತೆ ಕಾಣಲಿಲ್ಲ. ಮೇಡಂ ನಾನು ನಿಮ್ಮನ್ನ ತುಂಬಾ ಇಷ್ಟ ಪಡುತ್ತೇನೆ ನೀವು ಒಪ್ಪುವುದಾದರೆ ಮದುವೆ ಆಗುತ್ತೇನೆ. ಅದೆಲ್ಲಿತ್ತೋ ನನಗೆ ಅಷ್ಟು ಕೆಟ್ಟ ಕೋಪ. ಏನೋ ಮನೆಯಲ್ಲಿ ಹೇಳಿ ಬಂದಿದ್ದಿಯಾ? ನೋಡೋಕೆ ಸಭ್ಯನಂತಿದ್ದಿಯಾ ನಾಚಿಗೆಯಾಗಲ್ವ ಪ್ರೀತಿ ಪ್ರೇಮ ಅಂತ ಕಾಲ ಹರಣ ಮಾಡೋದಿಕ್ಕೆ.ನಂಗಂತೂ ಅದಿಕ್ಕೆಲ್ಲಾ ಸಮಯವಿಲ್ಲ ಜಸ್ಟ್ ಗೆಟ್ ಲಾಸ್ಟ್ ಪ್ರಾಂ ಹಿಯರ್ ಎಷ್ಟು ಸಾಧ್ಯನೋ ಅಷ್ಟು ಕಿರುಚಿದೆ. ’ನೀವು ಮತ್ತೆ ಸಿಗಲ್ಲ ಅಂತ ಗೊತ್ತು ಅದಿಕ್ಕೆ ಈಗಲೇ ಹೇಳಿದ್ದು. ನೀವಂದುಕೊಂಡಷ್ಟು ನಾನೇನೂ ಕೆಟ್ಟವನಲ್ಲ ಬೇಕಿದ್ರೆ ನಮ್ಮನೆಗೆ ಬನ್ನಿ ನನ್ನ ಮಮ್ಮಿ ಜೊತೆ ಮಾತನಾಡಿ ಎಂದ ನಮ್ಮನೆ ಇಲ್ಲೇ ಪಕ್ಕದಲ್ಲಿದೆ ಎಂದ. ಇವನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಕೊಂಡು ‘ಸರಿ ನಿನ್ನ ಮಮ್ಮಿ ಅತ್ರನೇ ಮಾತನಾಡುತ್ತೇನೆ. ಅಕೆಗೂ ಗೊತ್ತಾಗಲಿ ಎಂಥಹ ನೀಚ ಬುದ್ದಿಯ ಮಗನನ್ನು ತಾನು ಹೆತ್ತಿದ್ದೇನೆಂದು ಹೇಳಿದೆ’.

ಹತ್ತು ನಿಮಿಷದಲ್ಲಿ ಆತನ ಮನೆ ತಲುಪಿದೆ. ಆತ ಮನೆಗೋದೊಡನೆ ‘ಮಮ್ಮಿ ನಾನು ಮದುವೆಆಗುವವರು.. ಅವರ ಪರ್ಮಿಷಣ್ ಇನ್ನೂ ಸಿಕ್ಕಿಲ್ಲ’ ಎಂದು ಒಂದೇ ಉಸಿರಲ್ಲಿ ಹೇಳ್ತಾ ಇದ್ದ. ಈಕೆಯೂ ನನ್ನನ್ನು ವಿಚಿತ್ರವಾಗಿ ನೋಡಲು ಶುರುಮಾಡಿದಳು. ನಾನು ಮಾತಿಗಿಳಿದೆ.‘ನೋಡಿ ನಿಮ್ಮ ಮಗನು ದಾರಿ ತಪ್ಪುತ್ತಿದ್ದಾನೆ. ದಾರಿಯಲ್ಲಿ ಪಯಣದಲ್ಲಿ ಸಿಕ್ಕ ಸಿಕ್ಕ ಹುಡುಗಿಯರಿಗೆಲ್ಲಾ ಪ್ರೀತಿ ಪ್ರೇಮ ಎಂದು ತೊಂದರೆಕೊಡುತ್ತಿದ್ದಾನೆ. ಅವನಿಗೆ ಬುದ್ದಿವಾದ ಹೇಳಿ ಮರ್ಯಾದೆಯಾಗಿ ಬದುಕುವುದೇಗೆ ಎಂದು ನಾಲ್ಕು ಬುದ್ದಿ ಮಾತು ಹೇಳಿ... ನನಗೆ ಇದೆಲ್ಲಾ ಇಷ್ಟವಾಗಲ್ಲ. ಇನ್ನು ಮುಂದೆ ನನಗೆ ತೊಂದ್ರೆ ಕೊಟ್ರೆ ಪೋಲಿಸ್ ಕಂಪ್ಲೇಟ್ ಕೊಡಬೇಕಾಗುತ್ತದೆ... ’ ನಾನೂ ಇನ್ನೂ ಏನೇನೋ ಹೆಳಿದೆ.

ಆಕೆ ಮಾತ್ರ ಮರುತ್ತರವನ್ನೇ ನೀಡದೇ ನನ್ನನ್ನೇ ದಿಟ್ಟಿಸುತ್ತಿದ್ದಳು.‘ನಾನಂತೂ ಅವನನ್ನು ಪ್ರೀತಿಸೋಲ್ಲ ನನಗೆ ಸಾವಿರ ಸಮಸ್ಯೆಗಳಿವೆ.ನನ್ನದೇ ಆದ ಸಾವಿರ ತತ್ವಗಳಿವೆ’ ಮತ್ತೂ ಹೇಳಿದೆ. ಆಕೆ ಮಾತು ಮುರಿದು ಕೂಡಿಯೋದಿಕ್ಕೆ ಏನು ಬೇಕು’ ಅಂದಾಗ’ ’ಟ್ಯಾಂಕ್ಸ್’ಅಂದೇಳಿ ಅವರ ಮನೆಯಿಂದ ಹೊರಬಿದ್ದೆ.ಈ ಪ್ರಪಂಚನೇ ಹೀಗೆ ಯಾರನ್ನೂ ಯಾವುದೇ ಕಾರಣಕ್ಕೂ ನೆಮ್ಮದಿಯಿಂದ ಬದುಕೋದಿಕ್ಕೆ ಬಿಡಲ್ಲ ಎಂದುಕೊಂಡು ನನ್ನ ಬಸ್ಸ್ ಹಿಡಿದೆ. (ಸುಮ್ನೆ ಗೀಚಿದ್ದು... ನಿಜವಲ್ಲ)

July 19, 2007

ಬೆಂಗಳೂರು ಅಂದ್ರೆ...?

ಬೆಂಗಳೂರು ಅಂದ್ರೆ ಸುಂದರ ನಗರಿ ಎಂದುಕೊಂಡಿದ್ದೆ. ಆದ್ರೆ ಈಗ ಗೊತ್ತಾಗುತ್ತಿದೆ. ಬೆಂಗಳೂರು ಎಂಥಹ ಮಯಾ ನಗರಿಯೆಂದು. ಬೆಂಗಳೂರು ಹೇಗಿದೆ ಎಂದು ಯಾರಾದ್ರೂ ನನ್ನಲ್ಲಿ ಕೇಳಿದರೆ ನನ್ನ ಉತ್ತರ ಹೀಗಿರುತ್ತದೆ. ಬೆಂಗಳೂರು ಧೂಳು ಮಯ ಪ್ರದೇಶ, ಇಲ್ಲಿನ ಹವಾಗುಣ ದಿನೇ ದಿನೇ ಹದಗೆಡುತ್ತದೆ. ಮನೆಯಿಂದ ಹೊರಗೆ ಬಂದರೆ ಕಾಣುವುದು ಬಿಕ್ಷುಕರ ಹಾವಳಿ. ಕೈ ಕಾಲು ಎಲ್ಲಾ ಸರಿಯಾಗಿದ್ದರೂ ಅದೆಷ್ಟು ಮಂದಿ ಭಿಕ್ಷೆ ಬೇಡುತ್ತಿರುತ್ತಾರೆ! ಸ್ವಲ್ಪ ರಶ್ ಆದರೂ ಸರಿ ಇಲ್ಲಿನ ಜನ ಕದಿಯೋದಿಕ್ಕೆ ಏನು ಸಿಗುತ್ತೆ ಅಂತ ಕಾಯುತ್ತಿರುತ್ತಾರೆ. ನಮ್ಮ ವಸ್ತುಗಳ ಬಗ್ಗೆ ಸ್ವಲ್ಪ ಕೇರ್ ಲೆಸ್ ಆದರೂ ಕಶ್ಟನೇ...

ಇನ್ನು ಇಲ್ಲಿನ ಆಹಾರದ ಬಗ್ಗೆ ಹೇಳೋದಾದರೆ... ಹೇಗೆ ವರ್ಣಿಸುವುದು ಎಂಬುವುದೇ ತಿಳಿಯುತ್ತಿಲ್ಲ. ನಾವು ಕಾಲಿಗೆ ಹಾಗುವ ಚಪ್ಪಲಿಯಿಂದ ಹಿಡಿದು ಹೊಟ್ಟೆಗೆ ಹಾಕುವ ಆಹಾರವೆಲ್ಲವೂ ಬೀದಿಬದಿಯಲ್ಲಿಯೇ ಸಿಗುತ್ತದೆ. ಬೀದಿಯಲ್ಲಿ ಸಿಗುವ ಆಹಾರವನ್ನು ಶ್ರೀಮಂತರು ಬಡವರೆನ್ನದೇ ಎಲ್ಲರೂ ತಿನ್ನುತ್ತಾರೆ. ಅದರಲ್ಲೂ ರಸ್ತೆ ಪಕ್ಕದಲ್ಲಿ ಅದೂ ಧೂಳುಮಯ ಪ್ರದೇಶದಲ್ಲಿ ಪಾನಿ ಪುರಿ ತಿನ್ನುವ ಜನರನ್ನು ನೋಡುವಾಗ ಅಯ್ಯೋ ಅನ್ನಿಸುತ್ತೆ. ಧೂಳುಮಯ ಆಹಾರಕ್ಕಿಂತ ಹೋಟೆಲ್ ಗೆ ಹೋಗಿ ತಿನ್ನೋಣವೆಂದು ಹೋದರೆ ... ಆ ಮಸಾಲೆ ದೋಸೆಗೆ ಅದೆಷ್ಟು ಏಣ್ಣೆ ಹಾಕುತ್ತಾರೋ.. ದೋಸೆಯಿಂದ ಏಣ್ಣೆ ಇಳಿದು ಹೋಗುತ್ತದೆ. ದಿನವೊಂದಕ್ಕೆ ಒಂದು ಮಸಾಲೆ ದೋಸೆ ತಿಂದರೂ ಆರೋಗ್ಯ ಕೆಡುವುದು ಗ್ಯಾರಂಟಿ.

ಇಲ್ಲಿನ ನೀರಿನ ಬಗ್ಗೆ ಹೇಳಬೇಕೆ?... ನೀರು ಯಾವಾಗ ನೋಡಿದರೂ ಡಿ.ಡಿ.ಟಿ ಪೌಡರ್ ಸ್ಮೆಲ್ ಬರುತ್ತೆ. ಕುಡಿಯಲು ಹೋದರೆ ಕೇರಳದಲ್ಲಿ ಪ್ರಚಲಿತವಾಗಿರುವ ಎಂಡೋಸಲ್ಪಾನ್ ನೆನಪಾಗುತ್ತದೆ. ದಾಹವಾದರೆ ಬಿಸ್ಲರಿನೇ ಲೇಸು. ಬಿಸ್ಲರಿಗೆ ಕೆಮಿಕಲ್ ಹಾಕಿದ್ರೂ ವಾಸನೆ ಅಂತೂ ಇಲ್ಲ.

ಇನ್ನು ಮಹಾನಗರಿಯಲ್ಲಿ ವಾಹನಗಳ ಅರಚಾಟ, ಟ್ರಾಪಿಕ್ ಎಲ್ಲಾ ಮಾಮುಲಿ ಬಿಡಿ. ಅದರ ಬಗ್ಗೆ ಪ್ರಶ್ನೆನೇ ಇಲ್ಲ.

ಮನಸ್ಸಿಗೆ ಬೇಸರವಾಯಿತಾದರೆ ಏಕಾಂತ ಕಳೆಯಲು ಸೂಕ್ತವಾದ ಯಾವ ಸ್ಥಳನೂ ಇಲ್ಲ. ಎಲ್ಲಿ ಹೋದರೂ ಜನಸಂದಣಿ ತಪ್ಪಿದ್ದಿಲ್ಲ. ... ಹೇಳ ಹೋದರೆ ತುಂಬಾ ಇದೆ. ಅದನ್ನ ಓದುತ್ತಾ ಹೋದರೆ ನಿಮಗೂ ಬೇಸರವಾದೀತು. ಅದಿಕ್ಕೆ ಇಲ್ಲೇ ಮುಗಿಸುತ್ತೇನೆ.

July 16, 2007

ನಾವೇಕೆ ಕಪ್ಪು ಬಣ್ಣವನ್ನು ಇಷ್ಟಪಡುತ್ತೇವೆ?

ನಾವು ಕಪ್ಪು ಬಣ್ಣಕ್ಕೆ ಕೊಡುವ ಮಹತ್ವವನ್ನು ಬೇರೆ ಬಣ್ಣಕ್ಕೆ ಯಾಕೆ ಕೊಡುವುದಿಲ್ಲ? ಕಾಲಿಗೆ ಹಾಕುವ ಚಪ್ಪಲಿಯಿಂದ ಹಿಡಿದು ಹಣೆಗೆ ಹಾಕುವ ಬಿಂದಿವರೆಗೆ(ತಲೆಕೂದಲೊಂದನ್ನು ಬಿಟ್ಟು) ಕಪ್ಪು ಬಣ್ಣವನ್ನೇ ಹೆಚ್ಚಾಗಿ ಬಳಸುತ್ತೇವೆ. ನಮ್ಮ ಮೊಬೈಲ್ ಅದರ ಕವರ್, ಹೆಲ್ಮೆಟ್ ಹೀಗೆ...ಹೆಸರಿಸ ಹೊರಟರೆ ತುಂಬಾ ಇವೆ.ಕಪ್ಪು ಬಣ್ಣ ದು:ಖ, ಬೇಸರ,ಶರಣಾಗತಿ,ಸತ್ಯಾಗ್ರಹ,ಬಂದ್ ಮುಂತಾದ ಹಲವು ಕಾರಣಗಳಿಂದ ಗುರುತಿಸಲ್ಪಡುತ್ತವೆ.ಅದರೂ ಕಪ್ಪು ಬಣ್ಣವೇ ನಮಗೆ ಬೇಕು. ಅದು ನಮ್ಮ ನೆಚ್ಚಿನ ಬಣ್ಣವಲ್ಲದಿದ್ದರೂ ಅದಕ್ಕೆ ಕೊಡುವ ಮಹತ್ವ ಬೇರೆ ಯಾವುದೇ ಬಣ್ಣಕ್ಕೆ ಕೊಡುವುದಿಲ್ಲ.


ರಾಣಿ ಮುಖರ್ಜಿ ಬ್ಲ್ಯಾಕ್ ಸಿನಿಮಾದಲ್ಲಿ ಕಪ್ಪು ಬಣ್ಣಕ್ಕಿರುವ ಮಹತ್ವ ಕುರಿತು ಹೇಳುತ್ತಾಳೆ. ಬ್ಲ್ಯಾಕ್ ಇಸ್ ಆ ಕಲರ್ ಆಫ್ ಡೆಸ್ಟಿನೇಷನ್, ಬ್ಲ್ಯಾಕ್ ಇಸ್ ಅ ಕಲರ್ ಆಫ್ ಗ್ರ್ಯಾಜ್ಯುಯೇಶನ್, ಬ್ಲ್ಯಾಕ್ ಇಸ್ ಆ ಕಲರ್ ಆಫ್ ಸ್ಪಿರಿಟ್... ಕಪ್ಪು ಬಣ್ಣ ಧಾರ್ಮಿಕ ವಿಚಾರಗಳಿಗೆ ಅವಕಾಶಕೊಡುವುದಿಲ್ಲ. ಅದು ಎಲ್ಲರ ಬಣ್ಣ. ಕಪ್ಪು ಬಣ್ಣ ಸ್ವಾಭಾವಿಕ ಬಣ್ಣವೆಂದು ಗುರುತಿಸಲ್ಪಟ್ಟಿದೆ.ಕಪ್ಪು ಹೆಚ್ಚಿನ ಎಲ್ಲಾ ಬಣ್ಣಗಳೊಡನೆಯು ಮ್ಯಾಚ್ ಆಗುತ್ತದೆ.
ವಿಚಿತ್ರ ನೋಡಿ ಗಲ್ಲು ಶಿಕ್ಷೆಯಾಗುವಾಗಲೂ ಕಪ್ಪು ಬಟ್ಟೆ ಬಳಸುತ್ತಾರೆ.ಆದರೂ ನಮಗದು ಇಷ್ಟ.

June 25, 2007

ಹೌದು ನಮ್ದ ಮಂಗಳೂರು ಕನ್ನಡ ಏನೀವಗ?

ಮಂಗಳೂರಿನ ಸಂಸ್ಕ್ರತಿ, ಸಂಪ್ರದಾಯ, ವ್ಯವಹಾರ, ವಿದ್ಯಾಬ್ಯಾಸ ಪದ್ದತಿ, ಕಡಲ ಕಿನಾರೆ ಹೀಗೆ ಎಲ್ಲವನ್ನೂ ಇಷ್ಟ ಪಡುವವರು ಮಂಗಳೂರಿನ ಕನ್ನಡವನ್ನು ಮಾತ್ರ ವ್ಯಂಗ್ಯವಾಗಿ ಬಳಸುತ್ತಾರೆ. ಮಂಗಳೂರು ಕನ್ನಡ ಕೇಳೋದಿಕ್ಕೆ ಇಷ್ಟವಾಗುತ್ತೆ ಅಂಥ ಅಂದವರೇ ಮತ್ತೆ ಹಾಸ್ಯಮಾಡಿ ನಗುತ್ತಾರೆ.ಯಾಕೆ? ಇತ್ತೀಜಿನ ಸೂಪರ್ ಹಿಟ್ ಸಿನಿಮಾ ಮುಂಗಾರು ಮಳೆಯಿಂದ ಹಿಡಿದು ಹೆಚ್ಚಿನ ಸಿನಿಮಾಗಳು ಮಂಗಳೂರು ಕನ್ನಡವನ್ನು ಹಾಸ್ಯಸ್ಪದವಾಗಿ ಬಳಸಿದ್ದಾರೆ ಮುಂದೆಯೂ ಬಳಸಬಹುದು. ‘ಎಂಥದು ಮಾರಯ್ರೆ’ಎಂಬುವುದು ಮಂಗಳೂರಿನವರು ಬಳಸದಿದ್ದರೂ ಸಿನಿಮಾ ಮಹಿಮೆಯಿಂದ ಎಲ್ಲರೂ ಹೇಳುವುದು ಮಂಗಳೂರಿನವರದು ಮಾರಯ್ರೆ ಭಾಷೆಯೆಂದು.

ಮಂಗಳೂರಿನಲ್ಲಿ ಕನ್ನಡ ಮಾತ್ರವಲ್ಲದೇ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆ ಪ್ರಚಲಿತವಾಗಿದೆ. ಅದಕ್ಕಾಗಿಯೇ ಮಾತು ಮಧ್ಯ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳ ಮಿಶ್ರಣವಿರುತ್ತದೆ. ನಿಮಗೆ ಗೊತ್ತಿರಲಿ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆ ಮಾತನಾಡುವವರಿಗೆ ಕನ್ನಡ ಮಾತನಾಡಲು ಅದೆಷ್ಟು ಕಷ್ಟವಾಗು‌ತ್ತೆ ಎಂದು. ಆ ಭಾಷೆಗಳ ಉಚ್ಚಾರಗಳಿಗೂ ಕನ್ನಡ ಪದಗಳ ಉಚ್ಚಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಿದ್ದರೂ ನಾವೆಲ್ಲರೂ ಕನ್ನಡದ ಅಭಿಮಾನದಿಂದ ಕನ್ನಡವನ್ನು ವ್ಯವಹಾರಿಕ ಭಾಷೆಯನ್ನಾಗಿ ಬಳಸುತ್ತಿದ್ದೇವೆ.ಉಳಿದವರಂತೆ ಮಕ್ಕೊಳ್ತಿನೀ ಅನ್ನಲ್ಲ ಅಪ್ಪಟ್ಟ ಕನ್ನಡದಲ್ಲಿ ಮಲಗುತ್ತಿನಿ ಅನ್ನುತ್ತೀವಿ.ಮಂಗಳೂರಿಗೆ ಹೋಗಿ ಯಾರದರೂ ಮಾರಯ್ರೆ ಎಂಬ ಪದವನ್ನು ಬಳಸುತ್ತಾರಾ ಕೇಳಿ ಆಮೇಲೆ ಹೇಳಿ. ಸುಮ್ ಸುಮ್ನೆ ಮಂಗಳೂರಿನವರ ಕನ್ನಡವನ್ನು ಕೇವಲ ಹಾಸ್ಯಕ್ಕಾಗಿ ಬಳಸಬೇಡಿ. ನೀವು ಹೀಗೆನೇ ಮಂಗಳೂರಿನವರ ಕನ್ನಡಕ್ಕೆ ತಮಾಷೆ ಮಾಡಿದರೆ ಮಂಗಳೂರಿನವರು ಕನ್ನಡ ಮಾತನಾಡುವುದನ್ನೇ ಬಿಟ್ಟು ಬಿಟ್ಟಾರು. ಯಾಕೆಂದರೆ ನಮಗೆ ಕನ್ನಡ ಮಾತ್ರವಲ್ಲದೇ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳೂ ತಿಳಿದಿವೆ.

ನಾವು ಕನ್ನಡಕ್ಕೆ ಕೊಡುವ ಅಭಿಮಾನವನ್ನು ದುರುಪಯೋಗ ಮಾಡಬೇಡಿ.ಉಳಿದಂತೆ ನಿಮಗೆ ಬಿಟ್ಟದ್ದು...

June 20, 2007

ಹೆಸರಿನಿಂದಾದ ಆಪತ್ತು ಭಾಗ 2

ನಾನು ಪಿಯುಸಿ ಮಾಡಿದ್ದು ಸೇಂಟ್ ಆಗ್ನೇಸ್ ಕಾಲೇಜಿನಲ್ಲಿ.ನನ್ನ ದುರಾದ್ರಷ್ಟನೋ ಅದ್ರಷ್ಟನೋ ಪಿಯುಸಿಯಲ್ಲೂ ನನ್ನದೇ ಹೆಸರಿನ ವಿದ್ಯಾರ್ಥಿನಿ ಇದ್ದಳು. ಅವಳ ಪೂರ್ತಿ ಹೆಸರೂ ಕೂಡ same ಆಗಿತ್ತು.ಸಮಸ್ಯೆ ಹುಟ್ಟಿದ್ದೇ ಅಲ್ಲಿ. ನಾವು ಇಬ್ಬರೂ ಕ್ರಿಶ್ಚಿಯನ್ಸ್.ಇಬ್ಬರದೂ same subjects.ಅವಳು ಯಾವಾಗಲೂ fashionಗೆ ಮಹತ್ವ ಕೊಡುತ್ತಿದ್ದಳು. ಅದೆಷ್ಟು ತುಂಟಿ ಎಂದರೆ ತನ್ನಲ್ಲಿದ್ದ lipstickನ್ನು ತನ್ನ ಪುಸ್ತಕದ ಭಾವ ಚಿತ್ರಗಳ ತುಟಿಗಳಿಗೆ ಹಾಕುತ್ತಿದ್ದಳು.ಅವಳ ತರಲೆಗಳನ್ನು ಬರೆಯ ಹೊರಟರೆ ಪುಟಗಳು ಸಾಲದು.ತನ್ನ ಮದುವೆ ಬಗ್ಗೆ ಸದಾ ಕನಸ್ಸು ಕಾಣುವವಳು.(ಇತ್ತೀಚೆಗೆ ಅವಳ ಮದುವೆಯಾಯಿತು)ಅವಳು classಗೆ ಚಕ್ಕರ್ ಹಾಕುತ್ತಿದ್ದಳು.ಕಲಿಯುವುದರಲ್ಲೂ ಆಸಕ್ತಿ ತೋರಿಸುತ್ತಿರಲಿಲ್ಲ.

ನಾನಾಗ ಪ್ರಥಮ ಪಿಯುಸಿಯಲ್ಲಿದ್ದೆ. ಪರೀಕ್ಷೆಗೆ ಕೆಲವೇ ದಿನಗಳು ಉಳಿದಿದ್ದವು. ಅದೊಂದು ದಿನ ಸಿಸ್ಟರ್ ಶಾಲಿನಿ (ಉಪನ್ಯಾಸಕಿ) ತನ್ನ ಹಾಜರಾತಿ book ನ್ನು ನನ್ನ ಪಕ್ಕದಲ್ಲಿ ಇಟ್ಟು ಹೋಗಿದ್ದರು. ಏಕೋ ಕುತೂಹಲ ಉಂಟಾಯಿತು. Attendance ಹೇಗೆ ಹಾಕುತ್ತಾರೆ ಎಂದು ನೋಡುವುದಕ್ಕಾಗಿ ಪುಸ್ತಕ ತೆರೆದು ನನ್ನ ಹೆಸರು ನೋಡುವಾಗ!... ನನಗೆ ಆಶ್ಚರ್ಯ ಕಾದಿತ್ತು. ನನ್ನ ರೋಲ್ ನಂಬರ್ ಪಕ್ಕದಲ್ಲಿ ಇನ್ನೊಬ್ಬ ವೀಣಾಳ ಹೆಸರು, ಪಕ್ಕದಲ್ಲಿ ಅವರಪ್ಪನ ಹೆಸರು ಬರೆದಿದ್ದರು. ನನ್ನ internal marks,attendance ಎಲ್ಲಾ ಅವಳದ್ದಾಗಿತ್ತು.

ಈ ವ್ಯತ್ಯಾಸದ ಬಗ್ಗೆ ಅವಳಲ್ಲಿ ತಿಳಿಸಿದಾಗ ಅವಳು ‘ಏ ಸುಮ್ನೀರೆ ಅದೇನು ನಮ್ಮ ತಪ್ಪಾ ಅಂದಿದ್ದಳು’. ನನಗೆ ಮಾತ್ರ ನನ್ನ marksನ್ನೇಲ್ಲಾ ಅವಳಿಗೆ ಕೊಡುವುದು ಸರಿಯೆನ್ನಿಸಲಿಲ್ಲ.ಅದಲ್ಲದೇ ಮುಂದೆ final exam ನಲ್ಲೂ ಹೀಗೆ ಆದರೆ ಎಂಬ ಭಯವಿತ್ತು. ನೀನು ನನ್ನ ಜೊತೆಗೆ ಬರದಿದ್ದರೂ ಚಿಂತೆಯಿಲ್ಲ ನಾನಂತೂ ಇದನ್ನು ಸರಿ ಮಾಡಿಯೀ ಸೈ ಎಂದು ಹೇಳಿ ಸುಮಾರು ಹದಿನೈದು ದಿನ ಅಲೆದೆ. ಕಡೆಗೂ ನನ್ನದೆಲ್ಲವೂ ನನಗೆ ಲಭಿಸಿತು.

June 19, 2007

ನನ್ನ ಹೆಸರಿನಿಂದಾದ ಆಪತ್ತು ಭಾಗ 1

ಅಂದ ಹಾಗೇ ನನ್ನ ಹೆಸರು ಗೊತ್ತಲ್ಲ? ವೀಣಾ.

ಹೌದು ಕಣ್ರೀ ಬಹಳ ಹಳೇಯ ಕಾಲದ ಹೆಸರು..


ನಿಮಗೆಲ್ಲರಿಗೂ ನನ್ನ ಹೆಸರಿನ ಅರ್ಥ ಗೊತ್ತಿದೆ ಅಂತ ಅಂದುಕೊಂಡಿದ್ದೀನಿ. ಇಲ್ಲವಾದಲ್ಲಿ ಕನ್ನಡದ ಅಮ್ರತವರ್ಷಿಣಿ ಸಿನಿಮಾ ನೋಡಿ. ಅದರಲ್ಲಿ ನಾಯಕಿ ಸುಹಾಸಿನಿಯ ಹೆಸರು ವೀಣಾ. ನಾಯಕ/ವಿಲನ್ ರಮೇಶ್ ನಾಯಕಿಯ ಮನೆಗೆ ಬೇಟಿಕೊಟ್ಟಾಗ ನಾಯಕಿಯ ಹೆಸರಿನ ಅರ್ಥ ಹೇಳುತ್ತಾನೆ.

ಸುಮ್ನೆ time waste ಮಾಡದೇ ವಿಷಯಕ್ಕೆ ಬರುತ್ತೀನಿ.

ನಾನಾಗ ಹೈಸ್ಕೂಲ್ ವಿದ್ಯಾರ್ಥಿನಿ.ಕಲಿಯುವುದರಲ್ಲಿ ಅಷ್ಟೇನೂ ಹುಷಾರಿಲ್ಲದಿದ್ದರೂ ಶಾಲೆಗೆ ಹೋಗದೇ ಇರುತ್ತಿರಲಿಲ್ಲ.ಲೆಕ್ಕ ಪಾಠವೆಂದರೆ ನನಗೆ ತುಂಬಾ ಇಷ್ಟ. ಅಂದು teacher ನನಗೆ ಲೆಕ್ಕ ಹೇಳಿಕೊಡುತ್ತಿದ್ದರು.ಆಗಲೇ ನನಗೆ ಒಂದು ಕರೆ ಬಂದಿತ್ತು. ನಮ್ಮ ಶಾಲೆಯ ಪಕ್ಕದಲ್ಲಿರುವ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರು ನನಗೆ ಕರೆ ಕಳುಹಿಸಿದ್ದರು.ನನಗೆ ಲೆಕ್ಕ ತರಗತಿ ಬಿಟ್ಟು ಹೋಗಲು ಮನಸ್ಸು ಇಲ್ಲ ಅದಲ್ಲದೇ ನನ್ನನ್ನೇ ಯಾಕೆ ಕರೆದಿದ್ದಾರೆ ಎಂಬ ಭಯಾಂತಕ. ಏನು ಮಾಡಬೇಕೆಂದು ತಿಳಿಯದೇ ಚಡಪಡಿಸುತ್ತಿದ್ದೆ. ಲೆಕ್ಕ teacher ‘ವೀಣಾ ಬೇಗ ಹೋಗಿ ಬಾ’ ಎಂದ ಮೇಲೆ ಮಾತು ಮೀರುವ ಧೈರ್ಯ ನನಗಿಲ್ಲ. ಉಸಿರು ಬಿಗಿಹಿಡಿದು ಸೆಕ್ರಡ್ ಹಾರ್ಟ್ಸ್ ಶಾಲೆಯ ಮುಖ್ಯೋಪಾಧ್ಯಯರ ಕಛೇರಿಗೆಹೋದೆ. ಅವರು ನನಗೆ ಮುರನೇ ತರಗತಿಗೆ ಹೋಗಲು ಹೇಳಿದರು. ಶಾಲೆಯ ವಿದ್ಯಾರ್ಥಿ ಒಬ್ಬ ತರಗತಿಗೆ ಹೋಗುವ ದಾರಿ ತೋರಿಸಿದ. ತರಗತಿ ಒಳಗೆ entry ಕೊಡುವಾಗಲೇ ಮುರನೇ ತರಗತಿಯಲ್ಲಿದ್ದ teacher ನನಗೆ ಬೈಯ್ಯಲು ಶುರುಮಾಡಿದರು.ಸುಮಾರು ಹತ್ತು ನಿಮಿಷ ಬೈದರು.ನೀನು ಹೈಸ್ಕೂಲ್ ನಲ್ಲಿ ಓದುತ್ತಿದ್ದೀಯಾ ನಿನ್ನ ತಂಗಿಗೆ ಲೆಕ್ಕ ಕಲಿಸಲು ನಿನಗೆ ಆಗಲ್ವಾ? ನಿನ್ನಂಥ ಅಕ್ಕ ಇರುವುದರಿಂದಲೇ ಈಕೆ fail ಆದದ್ದು ಅನ್ನಬೇಕೇ?

ಈ ಪುಕ್ಕಲಿಗೆ ಅದೇಗೆ ಧೈರ್ಯ ಬಂತೋ ತಿಳಿಯದು.. ತಟ್ಟನೆ ಹೇಳಿದೆ. ಇವಳು ನನ್ನ ತಂಗಿ ಅಲ್ಲವೆಂದು. ಆ teacher ಮತ್ತೇ ಅವಳಲ್ಲಿ ವಿಚಾರಿಸಿದಾಗ ಅವಳು ನಾನು ಅವಳ ಅಕ್ಕ ಅಲ್ಲವೆಂದಳು. ಬದುಕಿತು ಬಡಜೀವ ಎಂದು ಖುಷಿ ಪಟ್ಟೆ.

ಪಾಪ ಆ teacherಗೆ ಏನು ಅನ್ನಿಸ್ಸಿತೋ ನನ್ನಲ್ಲಿ ಪರಿ ಪರಿಯಾಗಿ sorry ಕೇಳಿದ್ರು. teacher ನಿಮ್ಮ ತಪ್ಪಿಲ್ಲ ಬಿಡಿ ಅದೆಲ್ಲಾ ಗೊತ್ತಿಲ್ಲದೇ ಅದದಲ್ವಾ ಅಂತ ಅಂದರೂ ಅವರು ಅದೇನೋ ಪ್ರಮಾದ ನಡೆದಿತ್ತು ಅನ್ನೋ ತರಹ ವರ್ತಿಸ್ಸಿದ್ದರು.

ನಡೆದದ್ದು ಇಷ್ಟೇ,

ನನ್ನ ತರಗತಿಯಲ್ಲಿ ನನ್ನದೇ ಹೆಸರಿನ ಇನ್ನೊಬ್ಬಳು ಇದ್ದಳು. ಅವಳು hostel ನಲ್ಲಿರುವತ್ತಿದ್ದಳು. ಈ ಮುರನೇ ತರಗತಿ ವಿಧ್ಯಾರ್ಥಿ ಕೂಡ ಅವಳದೇ hostel ನಲ್ಲಿದ್ದುದರಿಂದ ಅವಳನ್ನು ಕರೆಯಲು ಹೇಳಿದ್ದರು ಆ teacher. ಕರೆ ಬಂದಾಗ ನನ್ನ ಲೆಕ್ಕ teacher (ನನ್ನದೇ ಹೆಸರಿನ ಇನ್ನೊಬ್ಬಳು) ಆ ವೀಣಾಳನ್ನು ಕರೆಯಲು ಯಾವುದೇ ಕಾರಣಗಳಿಲ್ಲ ಎಂದು ಮನದಲ್ಲೇ ಲೆಕ್ಕಾಚಾರ ಮಾಡಿ ನನ್ನ ಕಳುಹಿಸಿದ್ದರು. ಪರಿಣಾಮ ಬೈಗುಳದ ಸುರಿಮಳೆ ನನಗೆ ಸಿಕ್ಕಿತು. ಅವರ ಬೈಗುಳಕ್ಕಿಂತಲೂ ಅವರು ಕೇಳಿದ sorry ನನಗೆ ಮುಜುಗರ ಉಂಟುಮಾಡಿತ್ತು.

ನನ್ನ ಪ್ರಕಾರ 'ಅಮ್ಮಚ್ಚಿಯೆಂಬ ನೆನಪು'

'ಅಮ್ಮಚ್ಚಿಯೆಂಬ ನೆನಪು' ಸಿನಿಮಾ ಇತ್ತೀಚಿಗೆ ನೋಡಿದೆ. ನಮ್ಮ ಸುತ್ತಮುತ್ತಲಿರುವ ಸಾವಿರಾರು ಮಹಿಳೆಯರ ಕೌಟಿಂಬಿಕ  ಹೋರಾಟದ ವಾಸ್ತವಿಕ ಕಥೆಯಿದು. ಪ್ರತಿಯೋರ್ವ ...